ಸಂಗೀತಕ್ಕೆ ಭಾವನಾತ್ಮಕವಾಗಿ ಒಗ್ಗೂಡಿಸುವ ಶಕ್ತಿಯಿದೆ: ಎಚ್.ಟಿ.ಅನಿಲ್

MDK05
Published on

ಮಡಿಕೇರಿ: ಮಾನಸಿಕ ಒತ್ತಡ ಕಡಮೆಮಾಡಿ ಕ್ರಿಯಾಶೀಲತೆಯನ್ನು ಹೆಚ್ಚಿಸುವ ಶಕ್ತಿ ಸಂಗೀತಕ್ಕಿದ್ದು, ಭಾವನಾತ್ಮಕವಾಗಿ ಒಗ್ಗೂಡಿಸುವ ಅದ್ಬುತ ಕಲೆಯಾಗಿಯೂ ಸಂಗೀತವಾಗಿದೆ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಎಚ್.ಟಿ.ಅನಿಲ್ ಹೇಳಿದರು.


ನಗರದ ಬ್ರಾಹ್ಮಣ ವಿದ್ಯಾಭಿವದ್ದಿ ನಿಧಿಯ ಶತಮಾನೋತ್ಸವ ಸಭಾಂಗಣದಲ್ಲಿ ಶನಿವಾರ ಮುಳಿಯ ಜ್ಯುವೆಲ್ಲರ್ಸ್ ಸಂಸ್ಥೆಯ ವತಿಯಿಂದ ಆಯೋಜಿತ ಗಾನರಥ ಸಂಗೀತ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅನಿಲ್, ಮನಸ್ಸನ್ನು ಉಲ್ಲಾಸಗೊಳಿಸುವ, ಜಗತ್ತನ್ನು ಲವಲವಿಕೆಯಿಂದ ಇರಿಸುವ ಅಪೂರ್ವ ಶಕ್ತಿ ಸಂಗೀತಕ್ಕಿದೆ. ಅನೇಕ ಕಾಯಿಲೆಗಳ ನಿವಾರಣೆಗೂ ಸಂಗೀತ ಮದ್ದಾಗಿದೆ. ಮ್ಯೂಸಿಕ್ ತೆರಪಿ ಜಗತ್ತಿನಾದ್ಯಂತ ಆರೋಗ್ಯ ಕ್ಷೇತ್ರದಲ್ಲಿ ಜನಪ್ರಿಯವಾಗುತ್ತಿದೆ. ಮನರಂಜನೆಯ ಪ್ರಮುಖ ಅಂಶವಾಗಿರುವ ಸಂಗೀತ ಕಲೆ, ನಮ್ಮ ಸಂಸ್ಕತಿಯ ಪ್ರತಿಬಿಂಬವಾಗಿ ಕೂಡ ಗುರುತಿಸಲ್ಪಟ್ಟಿದೆ ಎಂದು ಸಂಗೀತ ಕ್ಷೇತ್ರದ ಹಿರಿಮೆಯನ್ನು ವರ್ಣಿಸಿದರು.


ಗಾನರಥದ ಮೂಲಕ ಕೊಡಗಿನ ವಿವಿದೆಡೆಗಳ ಹಲವಾರು ಹಾಡುಗಾರರಿಗೆ ಪ್ರೋತ್ಸಾಹ ದೊರಕಿರುವುದು ಹೆಮ್ಮೆ ತರುವ ವಿಚಾರ. ಓರ್ವ ಕೂಲಿಕಾರ್ಮಿಕನೂ ಗಾನರಥದ ವೇದಿಕೆಯಲ್ಲಿ ತನ್ನಲ್ಲಿರುವ ಸಂಗೀತದ ಅದ್ಬುತ ಪ್ರತಿಭೆ ಪ್ರದರ್ಶಿಸುತ್ತಾನೆ ಎಂಬುದು ಗಾನರಥದ ಸಫಲತೆಗೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದರು.


ಗಾನರಥ ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಾಹಿತಿ, ಕಲಾವಿದೆ ಮೊಣ್ಣಂಡ ಶೋಭಾಸುಬ್ಬಯ್ಯ, ಅನೇಕ ವರ್ಷಗಳಿಂದ ಮುಳಿಯ ಸಂಸ್ಥೆಯವರು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆ ಪ್ಲಾಸ್ಟಿಕ್ ಮುಕ್ತವಾಗುವ ನಿಟ್ಟಿನಲ್ಲಿಯೂ ಮುಳಿಯ ಸಂಸ್ಥೆಯವರು ವಿನೂತನವಾದ ಕಾರ್ಯಯೋಜನೆ ಹಮ್ಮಿಕೊಳ್ಳಲಿ ಎಂದು ಆಶಿಸಿದರು.


ಮುಳಿಯ ಸಂಸ್ಥೆಯ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಮಾತನಾಡಿ, ಬೆಳ್ತಂಗಡಿಯಿಂದ ಪ್ರಾರಂಭವಾದ ಗಾನರಥ ಎಂಬ ಸಾಂಸ್ಕತಿಕ ತೇರು ಕೊಡಗಿನಲ್ಲಿಯೂ ಎರಡನೇ ವರ್ಷಕ್ಕೆ ಕಾಲಿರಿಸಿದೆ. ಗಾನರಥದ ಮೂಲಕ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ನೂರಾರು ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸಿದ ಹೆಮ್ಮೆ ನಮ್ಮದಾಗಿದೆ. ಮುಂದಿನ ವರ್ಷಗಳಲ್ಲಿಯೂ ಜಿಲ್ಲೆಗಳ ತಾಲೂಕು ಮಟ್ಟದಲ್ಲಿ ಆಯ್ಕೆ ಪ್ರಕ್ರಿಯೆ ಕೈಗೊಂಡು ಗಾನರಥದ ಮೂಲಕ ಮತ್ತಷ್ಟು ಗಾಯಕರನ್ನು ಬೆಳಕಿಗೆ ತರಲಾಗುತ್ತದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಮುಳಿಯ ಸಂಸ್ಥೆಯ ಗೌರವ ಸಲಹೆಗಾರ ವೇಣುಶರ್ಮ, ಶಾಖಾ ಪ್ರಬಂಧಕರಾದ ತೀತಿಮಾಡ ಸೋಮಣ್ಣ, ಬಿ.ಎಸ್.ಕಿಶೋರ್, ಸಂಜೀವ ಹಾಜರಿದ್ದರು. ಇದೇ ಸಂದರ್ಭ ಗಾನರಥ ಕಾರ್ಯಕ್ರಮದ ಮೂಲಕ ಸಾಂಸ್ಕತಿಕ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುತ್ತಿರುವ ಮುಳಿಯ ಸಂಸ್ಥೆಯ ಅಧ್ಯಕ್ಷ ಕೇಶವಪ್ರಸಾದ್ ಮುಳಿಯರವರನ್ನು ಮಡಿಕೇರಿ ತಾಲೂಕು ಜಾನಪದ ಪರಿಷತ್ ಪರವಾಗಿ ಅಧ್ಯಕ್ಷ ಎಚ್.ಟಿ.ಅನಿಲ್, ನಿರ್ದೇಶರಾದ ಕೆ.ಜಯಲಕ್ಷ್ಮಿ, ಪ್ರತಿಮಾ ರೈ, ರೀನಾ ಅನಿಲ್ ಸನ್ಮಾನಿಸಿದರು. ಜಿಲ್ಲೆಯ ವಿವಿಧೆಡೆಗಳಿಂದ ಕಲಾವಿದರು ಗಾನರಥದಲ್ಲಿ ಪಾಲ್ಗೊಂಡಿದ್ದರು.

ವಿಜೇತರ ವಿವರ
ಹಿರಿಯರ ವಿಭಾಗದಲ್ಲಿ ದಿವಿಜೇಶ್(ಪ್ರ), ಮಂಜುನಾಥ್(ದ್ವಿ), ಕಿರಣ್ ಕುಮಾರ್(ತೃ), ಕಿರಿಯರ ವಿಭಾಗದಲ್ಲಿ ಸಿಂಚನಗೌಡ(ಪ್ರ), ಶ್ರಾವ್ಯ(ದ್ವಿ),ವನಿತಾ ತೃಥೀಯ ಬಹುಮಾನ ಪಡೆದರು. ಗಾನರಥ ಸಂಗೀತ ಸ್ಪರ್ಧೆಯ ತೀರ್ಪುಗಾರರಾಗಿ ನಾಪೋಕ್ಲುವಿನ ಸರಸ್ವತಿ ಮನೋಹರಿ ಮತ್ತು ಬಾಳೆಲೆಯ ಚಂದ್ರಕಲಾ ಕಾರ್ಯನಿರ್ವಹಿಸಿದರು. ೫೨ ಸ್ಪರ್ಧಿಗಳು ಭಾಗಿಯಾಗಿದ್ದರು. ಫೈನಲ್ನಲ್ಲಿ ೬ ಸ್ಪರ್ಧಿಗಳು ಎರಡು ವಿಭಾಗಗಳಲ್ಲಿ ಗಾನರಥದ ವಿಜೇತರಾಗಿ ಆಯ್ಕೆಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net