

ಸಾಗರ: ಇಂದು ಯುವಜನರ ಎದುರು ಸಾಕಷ್ಟು ಆಯ್ಕೆಗಳಿದ್ದು, ಸವಾಲುಗಳ ಸಹ ಇದೆ. ಸಮರ್ಥವಾದುದ್ದನ್ನು ಆಯ್ಕೆ ಮಾಡಿಕೊಳ್ಳುವುದು ಅವರ ಆಲೋಚನೆಗೆ ಬಿಟ್ಟಿರುತ್ತದೆ. ಸಂಗೀತ ಬರೀ ಮನೋರಂಜನೆಷ್ಟೇ ಅಲ್ಲ, ಮಾನಸಿಕ ಸ್ವಾಥ್ಯವನ್ನು ಕಾಪಾಡುತ್ತದೆ ಎಂದು ಹೆಗ್ಗೋಡಿನ ಉದ್ಯಮಿ ವಿಠ್ಠಲ ಪೈ ಹೇಳಿದರು.
ಶಂಕರಮಠದ ಸಭಾಂಗಣದಲ್ಲಿ ಶ್ರೀ ಚೆನ್ನಿಗ ಕಲಾಕೇಂದ್ರ ಆಯೋಜಿಸಿದ್ದ ಒಂದು ದಿನದ ಚೆನ್ನಿಗ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಶನಿವಾರ ಸಂಜೆ ಸಮಾರೋಪ ಭಾಷಣ ಮಾಡಿ, ಕರ್ನಾಟಕ ಸಂಗೀತ ಭಕ್ತಿಯ ಮಹತ್ವವನ್ನು ಪರಿಚಯಿಸುತ್ತದೆ. ಭಗವಂತನನ್ನು ಒಲಿಸಿಕೊಳ್ಳಲು ಸುಲಭ ಮಾರ್ಗವೇ ಭಕ್ತಿ ಎಂದರು.
ಪಾಲಕರು ಕೊಠಡಿಯ ಶಿಕ್ಷಣವನ್ನು ಮೀರಿ ಮಕ್ಕಳನ್ನು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಬರುಬರುತ್ತ ಆಧುನಿಕ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳುವ ಪರಿಪಾಠದಲ್ಲಿ ಮಹತ್ತರವಾದ ದೇಶಿಯ ಕಲೆಗಳನ್ನು ಮರೆಯುತ್ತಿದ್ದೇವೆ. ಅವುಗಳ ಪ್ರಾಮುಖ್ಯತೆಯನ್ನು ಪರಿಚಯಿಸುವಲ್ಲಿ ಇಂತಹ ಸಂಗೀತೋತ್ಸವ ಅವಶ್ಯಕ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ವಿದ್ವಾನ್ ಸಿ.ಎನ್.ಮಾಧವ ಭಟ್ ಚೆನ್ನಿಗತೋಟ ಮಾತನಾಡಿ, ಇತ್ತೀಚೀನ ದಿನಗಳಲ್ಲಿ ಕಲಿಕೆಗಿಂತ ಕಾರ್ಯಕ್ರಮಗಳನ್ನು ನೀಡುವುದರಲ್ಲಿಯೇ ಕಲಾವಿದರು ಆಸಕ್ತಿ ತೋರುತ್ತಿದ್ದಾರೆ. ಮೊದಲು ಕಲಿಕೆ ಮತ್ತು ಗ್ರಹಿಕೆಯ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಕರ್ನಾಟಕ ಸಂಗೀತದಲ್ಲಿ ನಿರಂತರ ಅಭ್ಯಾಸ ಮಾಡುವ ಮೂಲಕ ಯಶಸ್ಸು ಕಾಣಬೇಕು ಎಂದು ತಿಳಿಸಿದರು.
ಮೊಬೈಲ್ ಪ್ರಪಂಚವೇ ಎಲ್ಲವನ್ನು ಕಲಿಸುತ್ತದೆ ಎನ್ನುವ ಭ್ರಮೆ ಹೆಚ್ಚಾಗುತ್ತದೆ. ಚಿಕ್ಕ ಮಕ್ಕಳನ್ನು ಕೂಡ ಸಮಾಧಾನಿಸಲು ಮೊಬೈಲ್ ಒಂದೇ ಎನ್ನುವ ಮಾರ್ಗೋಪಾಯ ಆಗಿದೆ ಅಂದುಕೊಂಡಿದ್ದಾರೆ. ಒಂದು ಕಾಲದಲ್ಲಿ ಕೀರ್ತನೆಗಳ ಮೂಲಕ ಮಕ್ಕಳಿಗೆ ಲಾಲಿ ಹಾಡುತ್ತಿದ್ದರು. ದಿನಚರಿ ಸಂಗೀತದಿಂದ ಆರಂಭಗೊಂಡು ಮುಕ್ತಾಯ ಆಗುತ್ತಿತ್ತು. ಸಂಗೀತೋತ್ಸವಗಳು ಮಕ್ಕಳ ಕಲೆಯ ಅನಾವರಣಕ್ಕೆ ಸಾಕ್ಷಿಯಾಗಿದೆ. ಪಾಲಕರು ಮಕ್ಕಳನ್ನು ಸಂಗೀತದ ಕ್ಷೇತ್ರದಲ್ಲಿ ತೊಡಗಿಸಬೇಕು. ಕಲೆ ಸಿದ್ಧಿ ಆಗಬೇಕಾದರೆ ನಿರಂತರತೆಯಿಅದ ಮಾತ್ರ ಸಾಧ್ಯ, ಸಂಗೀತಕ್ಕೆ ಗುರುಮುಖೇನ ಶಿಕ್ಷಣ ಅವಶ್ಯಕ ಎಂದರು.
ನರಹರಿ ಗೀಜಗಾರು, ಸಿ.ಎಸ್.ಕೃಷ್ಣಮೂರ್ತಿ ಇತರರು ಹಾಜರಿದ್ದರು. ಶುಭಶ್ರೀ ಅಡಿಗ ವೀಣಾವಾದನ ನಡೆಸಿಕೊಟ್ಟರು. ಚೆನ್ನಿಗ ಕಲಾಕೇಂದ್ರದ ವಿದ್ಯಾರ್ಥಿಗಳು ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ವಾದ್ಯದಲ್ಲಿ ನಿಖಿಲ್ ಕುಂಸಿ , ಸಂವತ್ಸರ, ವಿವೇಕಕೃಷ್ಣ ಮತ್ತೂರು, ನರಸಿಂಹಮೂರ್ತಿ ಹಳೇಇಕ್ಕೇರಿ, ವಿದ್ವಾನ್ ಚೇತನ್, ಶ್ಯಾಮ್ ಸಹಕರಿಸಿದರು.