ಸಂವಿಧಾನ ರಕ್ಷಿಸುವ ಮನಸ್ಸು ಮೂಡಲಿ

dj hsd hamsaleka
Published on

ಹೊಸದುರ್ಗ: ಶೋಷಿತರು ಹಾಗೂ ಅಶಕ್ತರಿಗೆ ಶಕ್ತಿಯಾಗಿರುವ ಸಂವಿಧಾನವನ್ನು ರಕ್ಷಿಸಿಕೊಳ್ಳುವ ಮನಸ್ಸು ಜನರಲ್ಲಿ ಮೂಡಬೇಕಿದೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.

ಪಟ್ಟಣದ ಅಯೋಧ್ಯಾ ಮಂಟಪದಲ್ಲಿ ಶನಿವಾರ ರಾತ್ರಿ ಹೊಸದುರ್ಗ ನಾಗರೀಕ ವೇದಿಕೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಂವಿಧಾನವನ್ನು ರಕ್ಷಿಸುವ ಕಾರ್ಯವಾಗಬೇಕಿದೆ.

ಹಿಂದೆ ಯುದ್ಧಗಳು ಕತ್ತಿ, ಗುರಾಣಿಗಳಿಂದ ನಡೆಯುತ್ತಿದ್ದವು. ನಂತರ ಬಂದೂಕು ಬಂದಿತು. ಇದೀಗ ರಡಾರ್ ಬಂದಿವೆ. ಯುದ್ಧ ನಿಲ್ಲಿಸಲು ಎಲ್ಲರೂ ಮುಂದಾಗಬೇಕಿದೆ ಎಂದರು.

ಸ್ಮಾರ್ಟ್ ಸಿಟಿ ಕಲ್ಪನೆಯು ಸರಿಯಲ್ಲ ಬದಲಾಗಿ ಜನರಿಗೆ ಸ್ಮಾರ್ಟ್ ಹಳ್ಳಿಗಳು ಬೇಕಿವೆ. ರೈತ ತಾನು ಬೆಳೆದ ಬೆಳೆಯನ್ನು ತನ್ನ ಮನೆಯ ಮುಂಭಾಗದಲ್ಲಿ ರಾಶಿ ಹಾಕಿಕೊಂಡು ಮಾರುವಂತಾಗಬೇಕು.

ಸ್ಮಾರ್ಟ್ ಸಿಟಿಯ ಜನ ಹಳ್ಳಿಗೆ ಬಂದು ರೈತ ಕೇಳಿದಷ್ಟು ಹಣ ಕೊಟ್ಟು ಬೆಳೆಯನ್ನು ಕೊಳ್ಳುವಂತಾಗಬೇಕು. ಸರ್ಕಾರಗಳು ಸ್ಮಾರ್ಟ್ ವಿಲೇಜ್ ಮೂಲಕ ಇಂತಹ ಬದುಕನ್ನು ರೈತರಿಗೆ ನೀಡಬೇಕು ಎಂದರು.

ಚಿತ್ರರಂಗಕ್ಕೆ ನಾನು ಬಂದಾಗ ಸಂಗೀತ ಕ್ಷೇತ್ರ ಶೂನ್ಯವಾಗಿತ್ತು. ಸಂಗೀತ ನಿರ್ದೇಶಕರು ಡನೇ ಹಂತದ ಪ್ರತಿಭೆಗಳನ್ನು ಬೆಳೆಸಿರಲಿಲ್ಲ. ನಾನು ಕೂಡ ಇಂತಹ ಶೂನ್ಯದಲ್ಲಿ ಹುಟ್ಟಿದ ಪ್ರತಿಭೆ.

ಚಿತ್ರರಂಗ ಬೆಳೆಯಬೇಕು ಅದಕ್ಕಾಗಿ 150ಕ್ಕೂ ಹೆಚ್ಚು ಸಂಗೀತ ನಿರ್ದೇಶಕರನ್ನು ಸಂಗೀತ ಲೋಕದಲ್ಲಿ ಬೆಳೆಸಿದ್ದೇನೆ. ನಟ ಶಂಕರ್ ನಾಗ್ ಕಂಡ ಕನಸನ್ನು ನನಸು ಮಾಡಿದ್ದೇನೆ ಎಂದರು.

ಸಾನ್ನಿಧ್ಯವಹಿಸಿದ್ದ ಸಾಣೇಹಳ್ಳಿಯ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಂಸಲೇಖ ಅವರದು ತಾಯಿ ಹೃದಯ. ಅನಾಮದೇಯ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವ ಕೆಲಸ ಮಾಡಿದ್ದಾರೆ.

ಪ್ರತಿಭೆಗಳು ಅವಕಾಶವಿಲ್ಲದೆ ಕಮರದಂತೆ ನೋಡಿಕೊಳ್ಳುವ ಅಪ್ರತಿಮ ಗುಣ ಹಂಸಲೇಖ ಅವರಲ್ಲಿದೆ ಎಂದರು.

ಹೊಸದುರ್ಗದ ಮಣ್ಣಿನಲ್ಲಿದೆ ಜನಪದ ಶ್ರೀಮಂತಿಕೆ: ಗ್ರಾಮೀಣ ಪ್ರದೇಶದಲ್ಲಿ ಬಿದಿರಿನಿಂದ ತಯಾರಿಸಿದ ಗಣೆಗಳ ಮೂಲಕ ಸಂಗೀತ ನುಡಿಸುವವರ ದೊಡ್ಡ ಬಳಗವೇ ಇದೆ.

ಅವರನ್ನು ನನ್ನ ಸಂಗೀತ ಕಾಲೇಜಿಗೆ ಕರೆಸಿಕೊಳ್ಳಲು ಕಳೆದ 20 ವರ್ಷಗಳಿಂದ ಪ್ರಯತ್ನ ಪಡುತ್ತಿದ್ದೇನೆ. ಅದು ಸಾಧ್ಯವಾಗಿಲ್ಲ. ವೈಜ್ಞಾನಿಕವಾಗಿ ಜಗತ್ತಿನಲ್ಲಿ ಸಂಗೀತ ಹುಟ್ಟಿದ್ದು ಕೂಡ ಇದೇ ಗಣೆಗಳಿಂದಲೇ.

ಪ್ರಪಂಚದಲ್ಲಿನ ಎಲ್ಲ ಬುಡಕಟ್ಟು ಕಲಾವಿದರು ಬಳಸುವ ಗಣೆಗಳಿಗೆ 4 ರಂಧ್ರಗಳಿರುತ್ತವೆ. ಅದರಿಂದ ಸ್ವರಗಳು ಹುಟ್ಟುತ್ತವೆ. ಇಂತಹ ಜನಪದ ಶ್ರೀಮಂತಿಕೆ ಹೊಸದುರ್ಗದ ಮಣ್ಣಿನಲ್ಲಿದೆ ಎಂದು ಹಂಸಲೇಖ ಹೇಳಿದರು.

ಶಾಸಕ ಬಿ.ಜಿ.ಗೋವಿಂದಪ್ಪ, ಭಗಿರಥ ಗುರುಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಬೆಲಗೂರಿನ ಮಾರುತಿ ಪೀಠದ ವಿಜಯ ಮಾರುತಿ ಶರ್ಮ ಸ್ವಾಮೀಜಿ, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಸಾಹಿತಿಗಳಾದ ಚಂದ್ರಶೇಖರ ತಾಳ್ಯ, ಮೊಗೋದಿ ಮಂಜಪ್ಪ, ನಾಗರಿಕ ವೇದಿಕೆ ಅಧ್ಯಕ್ಷ ಗೋತಿಪ್ಪೇಶ್, ಉದ್ಯಮಿ ಡಿ.ಎಸ್.ಪ್ರದೀಪ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net