

ವಿಜಯವಾಣಿ ಸುದ್ದಿಜಾಲ ಧಾರವಾಡ
ತಮ್ಮ ಮಧುರ ಕಂಠದ ಮೂಲಕ ಗಾಯಕ ಹಾಗೂ ಸಂಗೀತ ನಿರ್ದೇಶಕ ರಾಜೇಶ ಕೃಷ್ಣನ್ ಹಾಗೂ ತಂಡದವರು ಧಾರವಾಡಿಗರಿಗೆ ಮೋಡಿ ಮಾಡಿದರು. ತಮ್ಮದೇ ಆದ ಪ್ರಸಿದ್ಧ ಹಾಡುಗಳ ಮೂಲಕ ಜನರು ಸಂಗೀತ ಲೋಕದಲ್ಲಿ ತೇಲುವಂತೆ ಮಾಡಿದರು.
ವಿಜಯದಶಮಿ ನಿಮಿತ್ತ ನಂದಗೋಕುಲ ಸ್ವಯಂ ಸೇವಾ ಸಂಸ್ಥೆ ಹಾಗೂ ವಿಜಯದಶಮಿ, ಸಾಂಸ್ಕೃತಿಕ ರಾಮಲೀಲಾ ಉತ್ಸವ ಸಮಿತಿ ವತಿಯಿಂದ ಇಲ್ಲಿನ ಕೆಸಿಡಿ ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಹಾಗೂ ರಾಮಲೀಲಾ ಕಾರ್ಯಕ್ರಮದಲ್ಲಿ ಗಾಯನ ಪ್ರಸ್ತುತಪಡಿಸಿದರು.
ಕಾಣದಂತೆ ಮಾಯವಾದನೋ ನಮ್ಮ ಶಿವ.., ಯಾರೋ ಕಣ್ಣಲ್ಲಿ ಕಣ್ಣನಿಟ್ಟು…, ಕುಚುಕು ಕುಚುಕು, ಗೆಳೆಯರೇ ಓ ಗೆಳೆಯರೇ ಸೇರಿದಂತೆ ಅನೇಕ ಹಾಡುಗಳನ್ನು ಪ್ರಸ್ತುತಪಡಿಸಿದರು. ಹಾಡುಗಳಿಗೆ ಪ್ರೇಕ್ಷಕರು ಕುಣಿದು ಸಂಭ್ರಮಿಸಿದರು. ಪ್ರತಿ ಹಾಡಿನ ನಂತರವೂ ಒನ್ಸ್ ಮೋರ್ ಬೇಡಿಕೆ ಸಾಮಾನ್ಯವಾಗಿತ್ತು. ಕಾರ್ಯಕ್ರಮದ ನಂತರವೂ ಪ್ರೇಕ್ಷಕರು ತಮ್ಮ ಮೆಚ್ಚಿನ ಗೀತೆಗಳನ್ನ ಹಾಡುವಂತೆ ಕೇಳಿಕೊಂಡರು. ಅವರಿಗೆ ನಿರಾಸೆ ಮಾಡದ ರಾಜೇಶ ಕೃಷ್ಣನ್, ಕೆಲ ಹಾಡುಗಳನ್ನು ಹಾಡಿ ರಂಜಿಸಿದರು.
ಕಾರ್ಯಕ್ರಮಕ್ಕೆ ಶಾಸಕರಾದ ಅರವಿಂದ ಬೆಲ್ಲದ ಹಾಗೂ ಮಹೇಶ ಟೆಂಗಿನಕಾಯಿ ಚಾಲನೆ ನೀಡಿದರು. ಮೇಯರ್ ವೀಣಾ ಬರದ್ವಾಡ, ಮಾಜಿ ಶಾಸಕಿ ಸೀಮಾ ಮಸೂತಿ, ಮಾಜಿ ಮೇಯರ್ ಈರೇಶ ಅಂಚಟಗೇರಿ, ಗೋವಿಂದ ಜೋಶಿ, ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ವಿಜಯಾನಂದ ಶೆಟ್ಟಿ, ಶೆಂಕರ ಶೇಳಕೆ, ಸಮಿತಿ ಅಧ್ಯಕ್ಷ ಸಂಜಯ ಕಪಟಕರ, ಈರಣ್ಣ ಹಪ್ಪಳಿ, ಸುನೀಲ ಮೋರೆ, ಮೋಹನ ರಾಮದುರ್ಗ, ರಾಕೇಶ ನಾಝರೆ, ಮಂಜುನಾಥ ನೀರಲಕಟ್ಟಿ, ಇತರರು ಇದ್ದರು.
ಬಳಿಕ ರಾವಣ ದಹನ ಕಾರ್ಯಕ್ರಮದ ಮೂಲಕ ಸಮಾರಂಭ ಸಂಪನ್ನಗೊಂಡಿತು.