ಪೊಲೀಸ್ ಬ್ಯಾಂಡ್‌ನಿಂದ ಸಂಗೀತ ಸುಧೆ

41
Published on

ಮೈಸೂರು: ಅರಮನೆ ವಿದ್ಯುತ್ ದೀಪಾಲಂಕಾರದಲ್ಲಿ ತೇಲಿ ಬಂದ ಪೊಲೀಸ್ ಸಮೂಹ ವಾದ್ಯಮೇಳ ಕೇಳುಗರ ಮನಗೆದ್ದಿತು. 12ನೇ ಶತಮಾನದ ಮಧ್ವಾಚಾರ್ಯರ ಕೃತಿಯಿಂದ ಇತ್ತೀಚಿನ ಎ.ಆರ್.ರೆಹಮಾನ್ ಸಂಗೀತ ಸಂಯೋಜನೆಯ ಗೀತೆಗಳನ್ನು ವಾದ್ಯಗಳಲ್ಲಿ ನುಡಿಸುವ ಮೂಲಕ ಗಮನ ಸೆಳೆಯಲಾಯಿತು.
ಆರಂಭದಲ್ಲಿ ಅರಮನೆಯ ಗೋಪುರಗಳ ಮೇಲಿನಿಂದ ರಾಜ ಕಹಳೆ ಮೊಳಗಿಸುವ ಮೂಲಕ ಕಾರ್ಯಕ್ರಮಕ್ಕೆ ರಾಜಪರಂಪರೆಯ ಮೆರಗು ನೀಡಲಾಯಿತು. ಭಾರತ್ ಕೀ ಜವಾನ್ ಗೀತೆಯೊಂದಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೇರಿದಂತೆ ಇತರ ಗಣ್ಯರು ಜನರಲ್ ಸಲ್ಯೂಟ್ ಪಡೆದು ಸಮೂಹ ಸಂಗೀತಕ್ಕೆ ಅಧಿಕೃತ ಅನುಮತಿ ನೀಡಿದರು.
ವಂದೇ ಮಾತರಂ, ಏ ಮೇರೆ ವತನ್ ಕೇ ಲೋಗೋ, ಭಾರತ್ ಹಮ್ ಕೋ ಜಾನ ಸೇ ಪ್ಯಾರಾ ಹಾಡನ್ನು ಇಂಗ್ಲಿಷ್ ಹಾಗೂ ಸಾಂಪ್ರಾಯಿಕ ವಾದ್ಯದ ಎಲ್ಲ ತಂಡದಿಂದ ಸಮೂಹ ಪ್ರಸ್ತುತಿ ಪಡಿಸಿದ್ದು, ದೇಶಭಕ್ತಿ ಮೂಡುವಂತೆೆ ಮಾಡಿದರು.
ಪೊಲೀಸ್ ವ್ಯಾದ್ಯತಂಡ, ಸ್ಟಿಕ್ ಮೇಜರ್‌ಗಳ ಕ್ವೀನ್ಸ್ ಕಲರ್, ಜಲ್‌ಪಕ್ಷಿ ಗೀತೆಗಳ ಹಿನ್ನೆಲೆ ಸಂಗೀತದೊಂದಿಗೆ ಸ್ವಸ್ತಿಕ್, ವೃತ್ತ, ಚೌಕ ಸೇರಿದಂತೆ ಇನ್ನಿತರೆ ವಿನ್ಯಾಸಗಳು ಗಮನ ಸೆಳೆದವು. ಕರ್ನಾಟಕ ವಾದ್ಯ ಹಾಗೂ ಆಂಗ್ಲ ವಾದ್ಯ ವೃಂದಗಳು ಸರದಿಯಲ್ಲಿ ಪ್ರಸ್ತುತ ಪಡಿಸಿದ ವಾದ್ಯ ಸಂಗೀತದ ಹಾಡುಗಳು ಬ್ರಿಟಿಸ್ ಹಾಗೂ ಮೈಸೂರು ಸಂಸ್ಥಾನದ ಹಳೆ ನೆನಪು ಮೆಲುಕು ಹಾಕುವಂತೆ ಮಾಡಿತು.
16ನೇ ಶತಮಾನದ ದಾಸಶ್ರೇಷ್ಠ ಕನಕದಾರ ಕೀರ್ತನೆಯಾದ ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ಹಂಸಧ್ವನಿ ರಾಗದಲ್ಲಿ ಮೂಡಿ ಬಂದು ಭಕ್ತಿ ಭಾವ ತರಿಸಿತು. 12ನೇ ಶತಮಾನದ ಮಧ್ವಾಚಾರ್ಯರ ಕೃತಿ ಪ್ರೀಣಯಾಮೋ ವಾಸುದೇವಂ ಹಾಡು ಮೋಹನ ರಾಗದಲ್ಲಿ ತೇಲಿ ಬಂತು.
ಸಂತ ತುಳಸೀದಾಸರ ಕೃತಿ ಮಹಾತ್ಮಗಾಂಧಿಯೂ ಅಚ್ಚುಮೆಚ್ಚಿನದಾಗಿದ್ದ ಶ್ರೀರಾಮಚಂದ್ರ ಕೃಪಾಲು ಭಜಮನ ಯಮನ್ ಕಲ್ಯಾಣಿ ರಾಗದಲ್ಲಿ ವಿಶೇಷವಾಗಿ ದಿಲ್‌ರೂಬ ವಾದ್ಯದೊಂದಿಗೆ ಕರ್ನಾಟಕ ವಾದ್ಯದಲ್ಲಿ ಮೂಡಿ ಬಂದಿದ್ದು, ಮೆಚ್ಚುಗೆ ಗಳಿಸಿತು.
ಕರ್ನಾಟಕ ವಾದ್ಯಕ್ಕೆ ಜುಗಲ್ ಬಂದಿ ನೀಡಿದ ಆಂಗ್ಲ ವಾದ್ಯಲ್ಲಿಯೂ ಹಲವು ವಾದ್ಯ ಸಂಗೀತ ತಲೆ ಕುಣಿಸುವಂತೆ ಮಾಡಿತು. 1914ರಲ್ಲಿ ಜರ್ಮನ್ ವಾದ್ಯಗಾರ ಹರ್ಮನ್ ಸ್ಟಾರ್ಕ್ ಅವರು ರಚಿಸಿದ ಲೈಟ್ ಕರ್ವಲಿ, ಪ್ರಸಿದ್ಧ ರಾಜ್ ತಂಡದ ಡೀಪ್ ಪರ್ಪಲ್ ಅವರ ರಾಕ್ ಮೆಲೋಡಿ, ಭಾರತದ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಸಂಯೋಜನೆ ಮಾಡಿರುವ ಹಲವು ಚಿತ್ರಗಳಿಂದ ಆಯ್ದ ಆರು ಗೀತೆಗಳ ಸಂಯೋಜನೆಯ ಹಾಡುಗಳು ಮೆಚ್ಚುಗೆ ಗಳಿಸಿದವು.
ವಯೋಲಿನ್ ಮಾಂತ್ರಿಕ ಪದ್ಮಭೂಷಣ ಡಾ.ಎಲ್.ಸುಬ್ರಹ್ಮಣ್ಯಂ ಅವರ ಸಂಯೋಜನೆಯ ಫ್ಯೂಸನ್ ಕರ್ನಾಟಕ ಹಾಗೂ ಆಂಗ್ಲ ಮಾಧ್ಯಮದಲ್ಲಿ ಮೂಡಿ ಬಂದರೆ, ಸಮೂಹ ವಾದ್ಯಮೇಳದಲ್ಲಿ ಡ್ರಮ್ಮರ್ಸ್‌ ಡಿಲೈಟ್ ಗಮನ ಸೆಳೆಯಿತು. ಅಂತಿಮವಾಗಿ ಸಾರೇ ಜಹಾನ್ ಸೇ ಅಚ್ಚ ಗೀತೆಯೊಂದಿಗೆ ತಂಡ ನಿರ್ಗಮನವಾಯಿತು.
ಗೃಹ ಸಚಿವ ಡಾ.ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕರಾದ ಟಿ.ಎಸ್.ಶ್ರೀವತ್ಸ, ತನ್ವೀರ್‌ಸೇಠ್, ಡಿ.ರವಿಶಂಕರ್, ಅನಿಲ್ ಚಿಕ್ಕಮಾದು, ವಿಧಾನ ಪರಿಷತ್ತಿನ ಸದಸ್ಯ ಡಾ.ಡಿ.ತಿಮ್ಮಯ್ಯ, ಪೊಲೀಸ್ ಮಹಾ ನಿರ್ದೇಶಕ ಡಾ.ಅಲೋಕ್‌ಕುಮಾರ್, ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net