

ವಿಜಯವಾಣಿ ಸುದ್ದಿಜಾಲ ಧಾರವಾಡ
ವಚನ ಸಂಗೀತ ಹಾಗೂ ವಿವಿಧ ಬಗೆಯ ಭಕ್ತಿ ಗೀತೆಗಳನ್ನು ಆಲಿಸುತ್ತಿದ್ದರೆ ಮಾನಸಿಕ ನೆಮ್ಮದಿ ಸಿಗುವುದರ ಜತೆಗೆ ಮನಸ್ಸು ಶಾಂತವಿರುತ್ತದೆ ಎಂದು ಸಂಶೋಧಕ ಸಾಹಿತಿ ರಂಜಾನ ದರ್ಗಾ ಹೇಳಿದರು.
ನಿವೃತ್ತ ನ್ಯಾಯಮೂರ್ತಿ ಡಾ.ವಿ.ಎಸ್.ಮಳಿಮಠ ಸ್ಮರಣಾರ್ಥ ನಗರದ ಬಸವಶಾಂತಿ ಮಿಷನ್ ಟ್ರಸ್ಟ್ ವತಿಯಿಂದ ಇಲ್ಲಿನ ಯಾಲಕ್ಕಿ ಶೆಟ್ಟರ್ ಕಾಲನಿಯ ಸೌಹಾರ್ದ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ನೆನಪಿನಂಗಳ ಸಂಗೀತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ.ವಿ.ಎಸ್.ಮಳಿಮಠ ಸಂಗೀತಪ್ರಿಯರಾಗಿದ್ದರು. ಬಿಡುವಿನ ಸಮಯದಲ್ಲಿ ಸಂಗೀತ ಆಲಿಸುವ ಹವ್ಯಾಸ ರೂಢಿಸಿಕೊಂಡು ನಾಡಿನ ಅನೇಕ ಸಂಗೀತ ಕಲಾವಿದರ ಸಂಗೀತ ಕೇಳಿ ಆನಂದಿಸುತ್ತಿದ್ದರು. ಸಾಹಿತ್ಯ ಸಂಗೀತಕ್ಕೆ ಹೆಚ್ಚು ಮಹತ್ವ ನೀಡಿದ್ದ ಅವರು ಕಲಾವಿದರನ್ನು ಗೌರವದಿಂದ ಕಾಣುತ್ತಿದ್ದರು. ಅವರ ಸ್ಮರಣಾರ್ಥ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಸವಶಾಂತಿ ಮಿಷನ್ ಟ್ರಸ್ಟ್ ಅಧ್ಯ ಮಹಾದೇವ ಹೊರಟ್ಟಿ ಮಾತನಾಡಿ, ಸಂಗೀತಕ್ಕೆ ಜಾತಿ, ಮತ, ಪಂಥ, ಭೇದ ಭಾವವಿಲ್ಲ. ಸಂಗೀತದಲ್ಲಿ ಹೆಚ್ಚು ಆಸಕ್ತಿ ಹೊಂದಿದವರು ಮಾನಸಿಕ ಸದೃಢತೆ ಹೊಂದಿರುತ್ತಾರೆ ಎಂದರು.
ಮಡಿವಾಳಪ್ಪ ಸಿರಿಯಣ್ಣವರ, ಡಾ.ಮೃತ್ಯುಂಜಯ ಶೆಟ್ಟರ, ಡಾ.ಅರ್ಜುನ ವಠಾರ, ಅಲ್ಲಮಪ್ರಭು ಕಡಕೋಳ, ಪ್ರೇಮಾ ಹೊರಟ್ಟಿ, ಪ್ರೇಮಾ ಹಲಕಿ, ಇತರರು ಇದ್ದರು. ರಾಜಶೇಖರ ಅಂಗಡಿ ಸ್ವಾಗತಿಸಿದರು. ಸುಧಾ ಕಬ್ಬೂರ ನಿರೂಪಿಸಿದರು.