

ಹೊನ್ನಾವರ: ಭಾರತದಲ್ಲಿ ಸಂಗೀತವು ಆಧ್ಯಾತ್ಮವಾಗಿದೆ. ಸಪ್ತ ಸ್ವರಗಳಿಗೂ ಪ್ರತ್ಯೇಕ ದೇವರಿದ್ದಾನೆ. ಸಂಗೀತವನ್ನು ಪ್ರೋತ್ಸಾಹಿಸಬೇಕು ಎಂದು ನೆಲೆಮಾವು ಮಠಾಧೀಶ ಶ್ರೀಮಾಧವಾನಂದ ಭಾರತಿ ಸ್ವಾಮೀಜಿ ಹೇಳಿದರು.
ಹಡಿನಬಾಳದಲ್ಲಿ ಭಾನುವಾರ ರಾಗಶ್ರೀ ರಾಷ್ಟ್ರೀಯ ಸಂಗೀತೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು. ಸಂಗೀತವು ಮಾನಸಿಕ ಚಿಕಿತ್ಸೆಯ ಮಾಧ್ಯಮವೂ ಹೌದು ಎಂಬುದು ಸಾಬೀತಾಗಿದೆ. ಆಕಳು ಸಂಗೀತ ಆಲಿಸಿ ಹೆಚ್ಚು ಹಾಲು ಕೊಡುತ್ತದೆ. ರೋಗಗಳು ಸಂಗೀತದಿಂದ ಗುಣವಾಗುತ್ತವೆ. ಆದ್ದರಿಂದ ಸಂಗೀತವನ್ನು ಹಾಡಲು ಕಲಿಯಿರಿ, ಆಲಿಸಿರಿ, ಸಂಗೀತಗಾರರನ್ನು ಪ್ರೋತ್ಸಾಹಿಸಿರಿ ಎಂದರು.
ಸಂಗೀತದ ಪೋಷಕ ಸಪ್ತಕದ ಜಿ.ಎಸ್. ಹೆಗಡೆ ಅವರಿಗೆ ದಿ. ಪಂ. ಎನ್.ಎಸ್. ಹೆಗಡೆ ಸ್ಮರಣಾರ್ಥ ರಾಗಶ್ರೀ ಪ್ರಶಸ್ತಿಯನ್ನು ಮತ್ತು ಪ್ರಸಿದ್ಧ ತಬಲಾ ವಾದಕ ಪಂ. ಗೋಪಾಲಕೃಷ್ಣ ಹೆಗಡೆ ಕಲಭಾಗ ಅವರಿಗೆ ದಿ. ಪಂ. ಜಿ.ಆರ್.ಭಟ್ಟ ಬಾಳೆಗದ್ದೆ ಸ್ಮರಣಾರ್ಥ ರಾಗಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಗಶ್ರೀ ರಾಷ್ಟ್ರೀಯ ಸಮ್ಮಾನ್ ಅನ್ನು ಅಂತಾರಾಷ್ಟ್ರೀಯ ಹಾರ್ಮೊನಿಯಂ ಕಲಾವಿದ ತನ್ಮಯ ದೇವಚಕೆ ಪುಣೆ ಅವರಿಗೆ ನೀಡಿ ಗೌರವಿಸಲಾಯಿತು.
ಸಭಾಧ್ಯಕ್ಷತೆ ವಹಿಸಿದ್ದ ಹಿರಿಯ ಚಿಂತಕ ಡಾ. ಜಿ.ಎಲ್. ಹೆಗಡೆ ಮಾತನಾಡಿ, ಭಾರತೀಯ ಕಲೆಗಳು ಪ್ರದರ್ಶನ ಕಲೆಗಳಲ್ಲ, ಆರಾಧನೆ ಕಲೆಗಳು. ಕಲಾಪ್ರದರ್ಶನವನ್ನು ದೇವರ ಆರಾಧನೆಯಂತೆ ನಡೆಸಿಕೊಡುವ ಕಲಾವಿದರು ಕಲೆಯನ್ನು ದೇವರಂತೆ ಕಾಣುತ್ತ ಬಂದಿದ್ದಾರೆ ಎಂದರು.
ಉಪನ್ಯಾಸಕ ನಾಗರಾಜ ಹೆಗಡೆ ಅಪಗಾಲ ಅಭಿನಂದನಾ ಮಾತನಾಡಿದರು. ರಾಗಶ್ರೀ ಸಂಗೀತ ಮತ್ತು ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ವಿದ್ವಾನ್ ಶಿವಾನಂದ ಭಟ್ಟ ಸ್ವಾಗತಿಸಿದರು. ಕಾರ್ಯದರ್ಶಿ ವಿದ್ವಾನ್ ಎನ್.ಜಿ. ಹೆಗಡೆ ಕಪ್ಪೆಕರೆ ವಂದಿಸಿದರು. ನಾಗರಾಜ ಹೆಗಡೆ ಖಾಸಖಂಡ ನಿರ್ವಹಿಸಿದರು.
ಸಂಗೀತ ಕಾರ್ಯಕ್ರಮ
ಹಾರ್ಮೋನಿಯಂ ವಾದಕರಾದ ತನ್ಮಯ ದೇವಚಕೆ ಹಾರ್ಮೋನಿಯಂ ಸೋಲೋ ಜನಮನ ಸೆಳೆಯಿತು. ತಬಲಾದಲ್ಲಿ ಸ್ವಪ್ನಿಲ್ ಭಿಸೆ, ಮುಂಬೈ ಅವರು ಅತ್ಯುತ್ತಮ ಸಾಥ್ ನೀಡಿದರು. ಸಹವಾದನದಲ್ಲಿ ಕು. ವಿಶ್ವಜಿತ್ ಕಿಣಿ, ತಾಳದಲ್ಲಿ ಕು. ಸಮರ್ಥ ಹೆಗಡೆ ಸಹಕರಿಸಿದರು. ಪುಣೆಯ ಸೌರಭ್ ಖಡ್ಗಾಂಕರ್ ಅವರು ರಾಗ ರಾಗೇಶ್ರೀ, ರಾಗಮಾಲಾ ಮತ್ತು ಅಭಂಗ್ ಪ್ರಸ್ತುತಪಡಿಸಿದರು. ತಬಲಾದಲ್ಲಿ ಕಾರ್ತಿಕ್ ಸ್ವಾಮಿ ಪುಣೆ, ಸಂವಾದಿನಿಯಲ್ಲಿ ಪ್ರಸಾದ್ ಕಾಮತ್ ಸಾಥ್ ನೀಡಿದರು. ತಾನ್ ಪುರಾದಲ್ಲಿ ಪ್ರಸನ್ನ ಭಟ್ ಮತ್ತು ತಾಳದಲ್ಲಿ ಪ್ರಥಮ್ ಭಟ್ ಸಹಕರಿಸಿದರು. ವಿದುಷಿ ನಯನಾ ಪ್ರಸನ್ನ ಅವರ ಶಿಷ್ಯರಿಂದ ನೃತ್ಯ ರೂಪಕ ನಡೆಯಿತು. ಕಪ್ಪೆಕೆರೆ ಮಹಾದೇವ ಹೆಗಡೆ ಸ್ಮರಣಾರ್ಥ ‘ಮಹಾಮಂತ್ರಿ ದುಷ್ಟಬುದ್ಧಿ’ ಯಕ್ಷಗಾನ ಪ್ರದರ್ಶನಗೊಂಡಿತು.