ಸರ್ಕಾರಿ ವೈದ್ಯಕೀಯ ಕಾಲೇಜ್‌ಗಾಗಿ ಧರಣಿಗೆ ಸಂಗೀತ ಕಲಾವಿದರ ಬೆಂಬಲ, ಹಾಡು ಹೇಳಿ ಸರ್ಕಾರದ ಗಮನ ಸೆಳೆದ ಖ್ಯಾತ ಗಾಯಕರು

SInGERS SUPPORTED PROTEST
ವಿಜಯಪುರ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ಸಂಗೀತ ಕಲಾವಿದರು ಹಾಡು ಹೇಳಿ ಬೆಂಬಲ ಸೂಚಿಸಿದರು. ಕಲಾವಿದರಾದ ಪ್ರಕಾಶ ಮಹೀಂದ್ರಕರ, ಪ್ರಶಾಂತ ಚೌಧರಿ, ಪ್ರಕಾಶ ಮಠ ಮತ್ತಿತರರಿದ್ದಾರೆ.
Published on

ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪಿಸಲು ಆಗ್ರಹಿಸಿ ಮತ್ತು ಪಿಪಿಪಿ ಮಾದರಿ ವಿರೋಧಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಜಿಲ್ಲೆಯ ಖ್ಯಾತ ಕಲಾವಿದರು ಹಾಡು ಹೇಳುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.

ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಗುರುವಾರ 15ನೇ ದಿನಕ್ಕೆ ಕಾಲಿರಿಸಿತು. ಈ ವೇಳೆ ಬೆಂಬಲ ಸೂಚಿಸಿದ ಕಲಾವಿದರು ಹಾಡು ಹೇಳಿ ಬೆಂಬಲ ಸೂಚಿಸಿದರಲ್ಲದೇ ಕೂಡಲೇ ರಾಜ್ಯ ಸರ್ಕಾರ ವೈದ್ಯಕೀಯ ಕಾಲೇಜ್ ಮಂಜೂರಿಸಬೇಕೆಂದು ಒತ್ತಾಯಿಸಿದರು.

ಕಲಾವಿದ ಪ್ರಕಾಶ ಮಹೀಂದ್ರಕರ ಮಾತನಾಡಿ, ಇದು ಕೇವಲ ಒಂದು ಕಟ್ಟಡದ ಅಥವಾ ಕೆಲವು ಹುದ್ದೆಗಳ ಪ್ರಶ್ನೆಯಲ್ಲ. ಇದು ನಮ್ಮ ಜಿಲ್ಲೆಯ ಭವಿಷ್ಯದ ಪ್ರಶ್ನೆ, ನಮ್ಮ ಮಕ್ಕಳ ಆರೋಗ್ಯದ ಪ್ರಶ್ನೆ ಮತ್ತು ನಮ್ಮೆಲ್ಲರ ಮಾನವೀಯ ಹಕ್ಕಿನ ಪ್ರಶ್ನೆ. ವೈದ್ಯಕೀಯ ಕಾಲೇಜು ಸ್ಥಾಪನೆಯಿಂದ ನಮಗೆ ಸಿಗುವ ದೊಡ್ಡ ಅನುಕೂಲಗಳೆಂದರೆ ಉತ್ತಮ ಆರೋಗ್ಯ ಸೇವೆ. ನೆನಪಿಡಿ, ಒಂದು ವೈದ್ಯಕೀಯ ಕಾಲೇಜು ಎಂದರೆ ಕೇವಲ ತರಗತಿ ಕೋಣೆಗಳಲ್ಲ. ಅದರ ಜೊತೆಗೆ ಒಂದು ಅತ್ಯಾಧುನಿಕವಾದ ಸರ್ಕಾರಿ ಆಸ್ಪತ್ರೆ ನಿರ್ಮಾಣವಾಗುತ್ತದೆ. ಇದರಿಂದಾಗಿ, ನಮ್ಮ ಸುತ್ತಮುತ್ತಲಿನ ಸಾವಿರಾರು ಜನರಿಗೆ, ಅದರಲ್ಲೂ ಬಡವರಿಗೆ, ತುರ್ತು ಚಿಕಿತ್ಸೆಗಳು, ತಜ್ಞರ ಸೇವೆಗಳು ಮತ್ತು ದೊಡ್ಡ ಕಾಯಿಲೆಗಳಿಗೆ ಉತ್ತಮ ಚಿಕಿತ್ಸೆ ನಮ್ಮ ಸ್ಥಳೀಯ ಮಟ್ಟದಲ್ಲೇ ಸಿಗುತ್ತದೆ. ಚಿಕ್ಕಪುಟ್ಟ ತೊಂದರೆಗಳಿಗೂ ಪಟ್ಟಣಕ್ಕೆ ಓಡಾಡುವುದು ತಪ್ಪುತ್ತದೆ. ಸ್ಥಳೀಯ ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿದೆ ಎಂದರು.

ಮತ್ತೋರ್ವ ಕಲಾವಿದ ಪ್ರಕಾಶ ಮಠ ಮಾತನಾಡಿ, ಈ ಕಾಲೇಜಿನಿಂದ ನಮ್ಮ ಸ್ಥಳೀಯ ಯುವಜನತೆಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗದ ಹೊಸ ದಾರಿ ತೆರೆದುಕೊಳ್ಳುತ್ತದೆ. ಆರ್ಥಿಕ ಪ್ರಗತಿಯಾಗಲಿದೆ. ನಗರದಲ್ಲಿ ವ್ಯಾಪಾರ ವಹಿವಾಟು ಹೆಚ್ಚಿ, ಆರ್ಥಿಕ ಅಭಿವೃದ್ಧಿಗೆ ದೊಡ್ಡ ಉತ್ತೇಜನ ಸಿಗುತ್ತದೆ. ಹೀಗಾಗಿ ಸರ್ಕಾರ ಹಠ ಬಿಟ್ಟು ತ್ವರಿತವಾಗಿ ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಸ್ಥಾಪಿಸಬೇಕು. ಯಾವುದೇ ಕಾರಣಕ್ಕೂ ಪಿಪಿಪಿ ಮಾದರಿಗೆ ಅವಕಾಶ ಕೊಡಬಾರದು ಎಂದರು.

ಪ್ರಶಾಂತ ಚೌಧರಿ ಮಾತನಾಡಿ, ಸರ್ಕಾರಿ ವೈದ್ಯಕೀಯ ಕಾಲೇಜ್‌ಗಾಗಿ ನಡೆಯುತ್ತಿರುವ ಹೋರಾಟದ ಧ್ವನಿ ಮನೆ-ಮನಗಳಿಗೂ ತಲುಪಿಸುವ ಉದ್ದೇಶದಿಂದ ಸಂಗೀತ ಸೇವೆ ನೀಡಲಾಗಿದೆ. ಈ ಹಾಡಿನ ಮೂಲಕವಾದರೂ ಹೋರಾಟದ ಕೂಗು ಕೇಳಿಸಲಿ. ಪ್ರಜ್ಞಾವಂತರು ಎಚ್ಚೆತ್ತುಕೊಂಡು ಹೋರಾಟಕ್ಕೆ ಕೈ ಜೋಡಿಸಲಿ ಎಂದರು.

ಕಲಾವಿದರಾದ ದೇವರಾಜ ಮಾನೆ, ಅನಿಲ ಚವಾಣ್, ಗಂಗಾ ಬಾಗಡೆ, ವೀರೇಶ ನಾಟಿಕಾರ, ಸಿಂಗರ್ ಪ್ರಶಾಂತ, ಗೀತಾ ಒಡೆಯರ್, ಮಾರುತಿ ಬೂದಿಹಾಳ, ರಾಜೇಶ ಛಲವಾದಿ, ವೀರೇಶ ತಂಬಾಕೆ, ಮುಬಾರಕ್ ದಫೇದಾರ್, ಶಿವಾನಂದ ಭಜಂತ್ರಿ, ಪರಶುರಾಮ ಭಜಂತ್ರಿ, ರವಿ ಕೋರಿ, ಆನಂದ ಹೂಗಾರ, ಫಯಾಜ್ ಕಲಾದಗಿ, ರಾಜೇಶ್ವರಿ ಮುಂಜಣಿ, ಅರವಿಂದ ಕಂಬಾರ ಮತ್ತಿತರರು ಹಾಡು ಹೇಳಿ ಗಮನ ಸೆಳೆದರು.

ಹೋರಾಟ ಸಮಿತಿ ಸದಸ್ಯರಾದ ಭಗವಾನ್ ರೆಡ್ಡಿ, ಅಪ್ಪಸಾಹೇಬ ಯರನಾಳ, ಅನಿಲ ಹೊಸಮನಿ, ಲಲಿತಾ ಬಿಜ್ಜರಗಿ, ಕೆ ಎಫ್ ಅಂಕಲಗಿ, ಸವಿದ್ಯಾವತಿ ಅಂಕಲಗಿ, ಸುರೇಶ ಬಿಜಾಪುರ, ಸುರೇಶ್ ಜೀಬಿ, ಲಕ್ಷ್ಮಣ ಹಂದ್ರಾಳ, ಬಾಳು ಜೇವೂರ, ಡಾ.ಎಂ.ಆರ್. ಗುರಿಗಾರ, ಸಂಗಪ್ಪ ಕಪಾಳೆ, ಫಯಾಜ್ ಕಲಾದಗಿ, ಶ್ರೀನಾಥ ಪೂಜಾರಿ, ಮಲ್ಲಿಕಾರ್ಜುನ ಬಟಗಿ, ಸಿದ್ದಲಿಂಗ ಬಾಗೇವಾಡಿ, ಭರತಕುಮಾರ ಎಚ್.ಟಿ, ಶಿವರಂಜನಿ ಎಸ್.ಬಿ, ಜಬೀನಾ ಅಥಣಿ, ಬಸವರಾಜ ಇಂಚಗೇರಿ, ಮಲ್ಲಿಕಾರ್ಜುನ ಎಚ್.ಟಿ, ಶಿವಬಾಳಮ್ಮ ಕೊಂಡಗೂಳಿ, ಮಲ್ಲಿಕಾರ್ಜುನ ಕೆಂಗನಾಳ, ಚೆನ್ನು ಕಟ್ಟಿಮನಿ, ಗಿರೀಶ್ ಕಲಘಟಗಿ, ಶ್ರೀಕಾಂತ ಕೊಂಡಗೂಳಿ, ಲಕ್ಷ್ಮಣ ಕಂಬಾಗಿ, ಅಕ್ರಂ ಮಾಶಾಳಕರ, ಸಿದ್ರಾಮಯ್ಯ ಹಿರೇಮಠ, ಶ್ರೀಕಾಂತ್ ಕೊಂಡಗೂಳಿ, ಬೋಗೇಶ್ ಸೋಲಾಪುರ, ಗೀತಾ ಎಚ್, ಬಾಬುರಾವ್ ಬೀರಕಬ್ಬಿ, ಸಂಗಪ್ಪ ಮಾಕವಾಗಿ, ಕಾವೇರಿ ರಜಪೂತ, ಸುಶೀಲ ಮಿಣಜಗಿ, ಜ್ಯೋತಿ ಮಿಣಜಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net