

ಕೋಲಾರ : ನಗರದ ಹಳೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆದಷ್ಟು ಬೇಗ ಸರ್ಕಾರಿ ವಸ್ತು ಸಂಗ್ರಹಾಲಯದ ಚಟುವಟಿಕೆ ಪ್ರಾರಂಭಿಸಲಾಗುವುದು ಎಂದು ಸರ್ಕಾರಿ ವಸ್ತು ಸಂಗ್ರಹಾಲಯದ ಉಪ ನಿರ್ದೇಶಕಿ ರೂಪಶ್ರೀ ಹೇಳಿದರು.
ನಗರದ ಸರ್ಕಾರಿ ಮಹಿಳಾ ಕಾಲೇಜು, ಪರಂಪರೆ ಕೂಟ ಮತ್ತು ಪುರಾತತ್ವ ಇಲಾಖೆಯಿಂದ ತಾಲೂಕಿನ ಕುರ್ಕಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪುರಾತನ ಸ್ಮಾರಕಗಳ ಸ್ವಚ್ಛತೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ನೂರಾರು ಸ್ಮಾರಕ, ವೀರಗಲ್ಲು, ದೇವಾಲಯಗಳು ನಿರ್ವಹಣೆಯಿಲ್ಲದೆ ಸೊರಗುತ್ತಿದ್ದು, ರಕ್ಷಿಸುವ ತುರ್ತು ಇದೆ. ಈ ನಿಟ್ಟಿನಲ್ಲಿ ಕೋಲಾರದಲ್ಲಿ ಸರ್ಕಾರಿ ವಸ್ತು ಸಂಗ್ರಹಾಲಯ ಪ್ರಾರಂಭಿಸಲು ಈಗಾಗಲೇ ಕಟ್ಟಡ ಸುಪರ್ದಿಗೆ ಬಂದಿದೆ. ಕರೊನಾದಿಂದ ಹಣ ಬಿಡುಗಡೆಯಾಗಿರಲಿಲ್ಲ. ಶೀಘ್ರ ಚಟುವಟಿಕೆ ಪ್ರಾರಂಭಿಸಿ ವೀರಗಲ್ಲು, ಶಾಸನ, ಜನಪದ, ಅಪಾಯದಲ್ಲಿರುವ ವಿಷಯ ಸಂಗ್ರಹಿಸಿ ವಸ್ತುಸಂಗ್ರಹಾಲಯದಲ್ಲಿ ಇಡುವ ಪ್ರಯತ್ನ ಮಾಡುತ್ತೇವೆ ಎಂದರು.
ವಿದ್ಯಾರ್ಥಿನಿಯರು ಹಳ್ಳಿಗಳಲ್ಲಿರುವ ಸ್ಮಾರಕ, ಶಾಸನ, ವೀರಗಲ್ಲು ಉಳಿಸಬೇಕು. ಹಳ್ಳಿಗಳಲ್ಲಿ ಅಜ್ಞಾನ ಇದೆ, ನಿಧಿಯಿದೆ ಎಂದು ಅಗೆದು ಸ್ಮಾರಕ ಧ್ವಂಸ ಮಾಡುತ್ತಿದ್ದಾರೆ. ಹಳ್ಳಿ ಜನರಿಗೆ ತಿಳಿವಳಿಕೆ ನೀಡಿ ಅವುಗಳು ಹಾಳಾಗದಂತೆ ರಕ್ಷಕರಾಗಬಹುದು ಎಂದು ಕಿವಿಮಾತು ಹೇಳಿದರು.
ಶಾಸನ ತಜ್ಞ ಪ್ರೊ.ಕೆ.ಆರ್. ನರಸಿಂಹನ್ ವೀರಗಲ್ಲು ಮಾತನಾಡಿ, ಕುರ್ಕಿಯಲ್ಲಿ 9ನೇ ಶತಮಾನದಿಂದ ವಿಜಯನಗರ ಕಾಲದ ನಾಲ್ಕೈದು ಶಾಸನಗಳಿವೆ. ಶಾಸನಗಳ ಕಲ್ಲು ಚಕ್ಕೆ ಎದ್ದು ಅಕ್ಷರ ಓದಲು ಆಗದಷ್ಟು ವಿರೂಪಗೊಂಡಿದೆ. ಈ ರೀತಿಯ ಪ್ರಾಚೀನ ಶಾಸನ ರಕ್ಷಣೆ ಮಾಡಬೇಕು ಎಂದು ಗ್ರಾಮಸ್ಥರನ್ನು ಕೋರಿದರು. ಪ್ರಾಧ್ಯಾಪಕ ಡಾ.ಜಿ. ಶಿವಪ್ಪ ಅರಿವು ಮಾತನಾಡಿ, 15 ದಿನಗಳ ಹಿಂದೆ ಇಲ್ಲಿಗೆ ಬಂದಿದ್ದಾಗ ವೀರರ ಗುಡಿ ದುಸ್ಥಿತಿ ಕಂಡು ಸ್ವಚ್ಛಗೊಳಿಸುವ ಸಂಕಲ್ಪ ತೊಟ್ಟು ಈ ಕಾರ್ಯಕ್ರಮ ರೂಪಿಸಲಾಗಿದೆ. ಜಿಲ್ಲೆಯಲ್ಲಿ ಸ್ಮಾರಕ, ವೀರಗಲ್ಲುಗಳ ಸಂಖ್ಯೆ ಹೆಚ್ಚಿದೆ. ಕಿರ್ಕಿ ಬೆಟ್ಟ ಕೆಂದಟ್ಟಿ, ಅರಾಭಿಕೊತ್ತನೂರು, ತ್ಯಾವನಹಳ್ಳಿ ಭಾಗದಲ್ಲಿನ ನೂರಾರು ನವಶಿಲಾಯುಗ ಸಮಾಧಿ ಧ್ವಂಸಗೊಳ್ಳುತ್ತಿದೆ. ಇವುಗಳ ಸಂರಕ್ಷಣೆಗೆ ಇದು ಸಕಾಲ ಎಂದರು.
ಕೆಪಿಆರ್‌ಎಸ್ ಮುಖಂಡ ಕುರ್ಕಿ ದೇವರಾಜ್ ಪುರಾತನ ಸ್ಮಾರಕಗಳ ಸಂರಕ್ಷಣೆ ಜವಾಬ್ದಾರಿ ಹೊರುವುದಾಗಿ ತಿಳಿಸಿದರು. ಕಾಲೇಜು ಪ್ರಾಧ್ಯಾಪಕರಾದ ಡಾ. ಸಿ.ಎ.ರಮೇಶ್, ಪ್ರೊ.ರವೀಂದ್ರ, ಪ್ರೊ.ಇಂದಿರಮ್ಮ ಹಾಗೂ 75ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವೀರಗುಡಿಯ ಸುತ್ತಮುತ್ತ ಬೆಳೆದಿದ್ದ ಗಿಡಗಂಟಿ, ಚೌಡೇಶ್ವರಿ ದೇವಸ್ಥಾನ ಸ್ವಚ್ಛತೆ ಕಾರ್ಯ ಕೈಗೊಂಡು ವೀರಗಲ್ಲು, ಶಾಸನಗಳನ್ನು ಪರಿಚಯಿಸಲಾಯಿತು. ವೀರಗಲ್ಲುಗಳನ್ನು ಯಾವ ಉದ್ದೇಶಕ್ಕೆ ಹಾಕುತ್ತಾರೆ, ಲಿಪಿಗಳ ಲಕ್ಷಣಗಳೇನು, ಅವುಗಳನ್ನು ಹೇಗೆ ಗ್ರಹಿಸಬೇಕು ಎಂಬುದನ್ನು ವಿದ್ಯಾರ್ಥಿನಿಯರಿಗೆ ವಿವರಿಸಲಾಯಿತು.