

ಬೆಂಗಳೂರು: ಸರ್ಕಾರದ ಅಳಿವು-ಉಳಿವಿನ ಮೇಲಾ ಗಲಿ, ಪ್ರತಿಪಕ್ಷಗಳ ಸ್ಥಾನ-ಮಾನದ ಮೇಲಾ ಗಲಿ ಕಿಂಚಿತ್ತೂ ಪರಿಣಾಮ ಬೀರದಿದ್ದರೂ ಮಂಗಳವಾರ ಹೊರಬೀಳಲಿರುವ ರಾಜ ರಾಜೇಶ್ವರಿ ನಗರ ಮತ್ತು ಶಿರಾ ಉಪ ಚುನಾವಣೆ ಹಾಗೂ ಮೇಲ್ಮನೆಯ ನಾಲ್ಕು ಸ್ಥಾನಗಳ ಚುನಾವಣೆ ಫಲಿ ತಾಂಶ ಅನೇಕ ನಾಯಕರ ಪಾಲಿಗೆ ಪ್ರಮುಖವಾಗಿದೆ.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಶಿರಾದಲ್ಲಿ ಬಿಜೆಪಿಯ ಬೇರಿಲ್ಲದಿದ್ದರೂ ಕಮಲ ನಾಯಕರ ಅಬ್ಬರ, ಆರ್ಭಟ ಕಾಂಗ್ರೆಸ್, ಜೆಡಿಎಸ್ ನಿದ್ದೆಗೆಡಿಸಿದ್ದು ಸುಳ್ಳಲ್ಲ. ದೇವೇಗೌಡರೇ ಖುದ್ದಾಗಿ ಕ್ಷೇತ್ರದಲ್ಲಿ ನಾಲ್ಕಾರು ದಿನ ಠಿಕಾಣಿ ಹೂಡಿದರೆ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ರ‍್ಯಾಲಿ ನಡೆಸಿ ದಳದ ಮತಬ್ಯಾಂಕ್ ಛಿದ್ರವಾಗದಂತೆ ತಡೆಯಲು ಶ್ರಮಿಸಿದ್ದಾರೆ.
ರಾಜರಾಜೇಶ್ವರಿನಗರದಲ್ಲಿ ಭದ್ರನೆಲೆ ಹೊಂದಿರುವ ಮುನಿರತ್ನ ಅಭ್ಯರ್ಥಿ ಎಂಬ ಕಾರಣಕ್ಕೆ ಬಿಜೆಪಿ ಆತ್ಮವಿಶ್ವಾಸ ದಿಂದಿದ್ದರೂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕುಸುಮಾ ಡಿ.ಕೆ. ರವಿ ರೂಪದಲ್ಲಿ ‘ಅನುಕಂಪ’ದ ಅಭ್ಯರ್ಥಿ ಕಣಕ್ಕಿಳಿಸುವ ಮೂಲಕ ಸವಾಲೊಡ್ಡಿದರು. ಮುನಿರತ್ನ, ಡಿಕೆಶಿ, ಸಿದ್ದರಾಮಯ್ಯ, ಸಿಎಂ ಯಡಿಯೂರಪ್ಪ ಎಲ್ಲರಿಗೂ ಆರ್.ಆರ್. ನಗರ ಸಮರ ಗೆಲ್ಲುವುದು ಪ್ರತಿಷ್ಠೆಯ ವಿಚಾರವಾಗಿದೆ. ಶಿರಾದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಯುವಕರ ದೊಡ್ಡ ತಂಡವೊಂದು ಶ್ರಮಿಸಿರುವುದು ಸರ್ಕಾರಕ್ಕೆ ಆಶಾದಾಯಕ ವಾತಾವರಣ ಮೂಡಿಸಿದೆ.
ಶಿರಾದಲ್ಲಿ ಟಿ.ಬಿ. ಜಯಚಂದ್ರ ಸೋತರೆ ಇದು ಕೊನೆಯ ಚುನಾವಣೆ ಆಗಲಿದೆ. ಆರ್.ಆರ್.ನಗರದಲ್ಲಿ ಬಿಜೆಪಿಗೆ ನೆಲೆ ಹಾಗೂ ಮುನಿರತ್ನಗೆ ಮಂತ್ರಿಗಿರಿ ಪಡೆಯಲು ಗೆಲುವು ಅನಿವಾರ್ಯ. ಜೆಡಿಎಸ್ ಕೂಡ ಅಸ್ತಿತ್ವ ಉಳಿಸಿಕೊಳ್ಳುವ ಹೋರಾಟದಲ್ಲಿದೆ. ಒಟ್ಟಾರೆ ಈ ಚುನಾವಣೆ ಫಲಿತಾಂಶ ಮೂರೂ ಪಕ್ಷಗಳ ನಾಯಕರ ಎದೆಯಲ್ಲಿ ನಡುಕ ಉಂಟು ಮಾಡಿದೆ. ಎರಡೂ ಕ್ಷೇತ್ರಗಳಲ್ಲಿ ಜಾತಿ ಲೆಕ್ಕಾಚಾರಗಳು ಹಣಾಹಣಿಯ ರಂಗೇರಿಸಿವೆ. ರಾಜರಾಜೇಶ್ವರಿನಗರದಲ್ಲಿ ಕನಿಷ್ಠ ಪ್ರಮಾಣದ ಹಾಗೂ ಶಿರಾದಲ್ಲಿ ಭಾರೀ ಸಂಖ್ಯೆಯಲ್ಲಿ ಮತದಾನವಾಗಿರುವುದು ಫಲಿತಾಂಶದ ಮೇಲೆ ಯಾವ ಪ್ರಮಾಣ ಬೀರಲಿದೆ ಕಾದುನೋಡಬೇಕಿದೆ. ಜೆಡಿಎಸ್ ಗೆದ್ದರೆ ತನ್ನ ಅಸ್ತಿತ್ವವನ್ನು ಸಾಬೀತು ಪಡಿಸಿದಂತಾಗುತ್ತದೆ. ಸೋತರೆ ಶಾಸಕರ ವಲಸೆ ಪರ್ವ ಆರಂಭವಾಗುವ ಭೀತಿ ಇದೆ.
ಕುತೂಹಲದಲ್ಲಿ ಸಿಎಂ: ತಮ್ಮ ಮುಂದಿನ ಅಧಿಕಾರಾವ ಧಿಯ ಹಾದಿಯನ್ನು ಸುಗಮ ಮಾಡಿಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪಾಲಿಗೆ ಈ ಎರಡೂ ಕ್ಷೇತ್ರಗಳ ಗೆಲುವು ಅತ್ಯಗತ್ಯ. ಹೀಗಾಗಿಯೇ ಫಲಿತಾಂಶದ ಮೇಲೆ ಬಿಎಸ್ವೈ ಕುತೂಹಲ ಹೆಚ್ಚಿದೆ. ಕಳೆದ ಅವಧಿಯಲ್ಲಿ 15 ಕ್ಷೇತ್ರಗಳ ಉಪಚುನಾವಣೆಯನ್ನು ಗೆದ್ದುಕೊಂಡು ಸರ್ಕಾರ ಉಳಿಸಿಕೊಂಡಿದ್ದ ಬಿಎಸ್ವೈ ಈ ಬಾರಿ ಶಿರಾ ಹಾಗೂ ಆರ್.ಆರ್. ನಗರಗಳೆರಡರಲ್ಲೂ ಪ್ರಚಾರ ನಡೆಸಿದ್ದಾರೆ. ಮುನಿರತ್ನ ಅವರನ್ನು ಗೆಲ್ಲಿಸಿ ಸಚಿವರನ್ನಾಗಿ ಮಾಡಿ ಎನ್ನುವ ಮೂಲಕ ಮತಗಾಳವನ್ನೂ ಹಾಕಿದ್ದರು. ಅತ್ತ ಶಿರಾದಲ್ಲಿ ತಮ್ಮ ಪುತ್ರ ವಿಜಯೇಂದ್ರರಿಗೇ ಪಕ್ಷದ ಹೊಣೆಗಾರಿಕೆ ನೀಡಿದ್ದರು.
ಮೇಲ್ಮನೆಗೂ ಮಹತ್ವ: ವಿಧಾನ ಪರಿಷತ್ನ ನಾಲ್ಕು ಸ್ಥಾನಗಳ ಫಲಿತಾಂಶ ರಾಜಕೀಯವಾಗಿ ಮಹತ್ವದ ಬದಲಾವಣೆಗೆ ಕಾರಣ ವಾಗಲಿದೆ. ಆಡಳಿತಾರೂಢ ಬಿಜೆಪಿ ಹೆಚ್ಚು ಸ್ಥಾನಗೆದ್ದರೆ, ಸಂಖ್ಯಾಬಲ ಹೆಚ್ಚಿಸಿಕೊಂಡು ಮೇಲ್ಮನೆಯಲ್ಲಿ ಮಸೂದೆ ಪಾಸ್ ಮಾಡಿಕೊಳ್ಳುವುದು ಸಲೀಸಾಗುತ್ತದೆ.