ಮಂಗಳೂರು ತಲುಪಿದ ದಮಾಮ್, ಒಮನ್ ವಿಮಾನ

mangalore airport new
Published on

ಮಂಗಳೂರು: ಅನಿವಾಸಿ ಕನ್ನಡಿಗರನ್ನು ಹೊತ್ತು ಶನಿವಾರ ದಮಾಮ್ ಹಾಗೂ ಒಮನ್‌ನಿಂದ ಚಾರ್ಟರ್ ವಿಮಾನಗಳು ಶನಿವಾರ ಸಾಯಂಕಾಲ ಮಂಗಳೂರಿಗೆ ಆಗಮಿಸಿವೆ. ಆದರೆ ಇದೇ ಸಂದರ್ಭ ಕುವೈತ್‌ನಿಂದ ಮಂಗಳೂರಿಗೆ ಬರಬೇಕಾಗಿದ್ದ ಚಾರ್ಟರ್ ವಿಮಾನದ ಪ್ರಯಾಣ ಕೊನೆಯ ಕ್ಷಣದಲ್ಲಿ ರದ್ದುಗೊಂಡಿದೆ.

ದಮಾಮ್‌ನಿಂದ ಆಗಮಿಸಿದ 169 ಪ್ರಯಾಣಿಕರು ಇರುವ ಇಂಡಿಗೊ ವಿಮಾನ ಸಾಯಂಕಾಲ 5.50 ಹಾಗೂ 169 ಪ್ರಯಾಣಿಕರನ್ನು ಹೊತ್ತ ಒಮಾನ್‌ನಿಂದ ಹೊರಟ ಸಲಾಮ್ ಏರ್‌ಲೈನ್ಸ್ ವಿಮಾನ ರಾತ್ರಿ ಸುಮಾರು 9 ಗಂಟೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ.

ಲಾಕ್‌ಡೌನ್ ಬಳಿಕ ಕುವೈಟ್‌ನಿಂದ ಮಂಗಳೂರಿಗೆ ಆಗಮಿಸುವ ವಿಮಾನ ರದ್ದುಗೊಳ್ಳುತ್ತಿರುವುದು ಇದು ಮೂರನೇ ಬಾರಿ. ಮಂಗಳೂರಿಗೆ ಆಗಮಿಸಿದ ಎಲ್ಲ ಪ್ರಯಾಣಿಕರನ್ನು ತಪಾಸಣೆ ನಡೆಸಿ ಬಳಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಈ ವಿಮಾನದಲ್ಲಿ ಗರ್ಭಿಣಿಯರು, ಹಿರಿಯ ನಾಗರಿಕರು ಹಾಗೂ ಅನಾರೋಗ್ಯ ಪೀಡಿತರು ಇದ್ದರು.

ಸಿಗಲೇ ಇಲ್ಲ ಸರ್ಕಾರದ ಅನುಮತಿ

ಕರೊನಾ ಲಾಕ್‌ಡೌನ್ ಬಳಿಕ ಕುವೈತ್-ಮಂಗಳೂರು ನಡುವೆ ಯಾವುದೇ ವಿಮಾನ ಸಂಚಾರ ಈವರೆಗೆ ಸಾಧ್ಯವಾಗಿಲ್ಲ. ಕೇಂದ್ರ ಸರ್ಕಾರದ ವಂದೇ ಭಾರತ್ ಮಿಷನ್‌ನಡಿಯೂ ಅಲ್ಲಿಂದ ವಿಮಾನ ಮಂಗಳೂರಿಗೆ ಆಗಮಿಸಿಲ್ಲ. ಶನಿವಾರ ನಿಗದಿಯಾಗಿದ್ದ ಚಾರ್ಟರ್ ವಿಮಾನ ಕೂಡ ಕೊನೆಕ್ಷಣದಲ್ಲಿ ರದ್ದುಗೊಂಡಿದೆ. ಕುವೈತ್ -ಕೇರಳ ಕನ್ನಡಿಗರ ಸಂಘಟನೆ ಈ ವಿಮಾನ ಸಂಚಾರಕ್ಕೆ ಸಾಕಷ್ಟು ಪ್ರಯತ್ನ ನಡೆಸಿತ್ತು. 164 ಮಂದಿ ಪ್ರಯಾಣಿಕರು ಟಿಕೆಟ್ ಕಾದಿರಿಸಿದ್ದರು. ಇಂಡಿಗೋ ವಿಮಾನ ಕುವೈತ್‌ನಿಂದ ಹೊರಟು ಸಂಜೆ 6 ಗಂಟೆಗೆ ಮಂಗಳೂರು ತಲುಪಬೇಕಾಗಿತ್ತು. ಕುವೈತ್ ರಾಯಭಾರ ಕಚೇರಿಯೂ ಅನುಮತಿ ನೀಡಿತ್ತು. ಆದರೆ ಶನಿವಾರ ಬೆಳಗ್ಗಿನವರೆಗೂ ವಿಮಾನ ಮಂಗಳೂರಿಗೆ ಆಗಮಿಸಲು ರಾಜ್ಯ ಸರ್ಕಾರದಿಂದ ಅನುಮತಿ ಸಿಗದ ಕಾರಣ ಇಂಡಿಗೋ ಸಂಚಾರ ರದ್ದುಪಡಿಸಿತು.

ಕನ್ನಡಿಗ ಪ್ರಯಾಣಿಕರು ಅತಂತ್ರ

ಕುವೈತ್ ವಿಮಾನ ದಿಢೀರ್ ರದ್ದುಗೊಂಡ ಕಾರಣ, ಅಲ್ಲಿ ವಸತಿ ಬಿಟ್ಟುಕೊಟ್ಟು ಹೊರಟಿದ್ದ ಕನ್ನಡಿಗ ಪ್ರಯಾಣಿಕರು ಈಗ ಅತಂತ್ರ ಸ್ಥಿತಿ ಅನುಭವಿಸುವಂತಾಗಿದೆ. 164 ಮಂದಿ ಪ್ರಯಾಣಿಕರ ಪೈಕಿ 8 ಮಂದಿ ವೀಸಾ ಕಳಕೊಂಡವರು. ಈ ರೀತಿ ಸಿಲುಕಿಕೊಂಡವರನ್ನು ಕುವೈತ್ ಸರ್ಕಾರ ತನ್ನದೇ ಖರ್ಚಿನಲ್ಲಿ ಅವರವರ ತಾಯ್ನಡಿಗೆ ಕಳುಹಿಸಲು ಕ್ರಮ ಕೈಗೊಂಡಿತ್ತು. ಆದರೆ ಈ 8 ಮಂದಿ ಬಾಕಿಯಾಗಿದ್ದರು. ಅವರನ್ನು ಇದೇ ಚಾರ್ಟರ್ ವಿಮಾನದಲ್ಲಿ ಕಳುಹಿಸಲು ಟಿಕೆಟ್ ಕಾದಿರಿಸಲಾಗಿತ್ತು. ಇದಲ್ಲದೆ ಬಹುತೇಕ ಮಂದಿ ಊರಿಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಮನೆಯ ಬಾಡಿಗೆಯನ್ನು ಚುಕ್ತಾ ಮಾಡಿ ಹೊರಟಿದ್ದರು. ಈಗ ವಿಮಾನ ರದ್ದುಗೊಂಡ ಕಾರಣ ಮತ್ತೆ ಬಾಡಿಗೆ ಮನೆಗೆ ಹೋಗುವಂತೆಯೂ ಇಲ್ಲ, ಮತ್ತೆ ಬಾಡಿಗೆ ಮನೆ ಮಾಡುವಂತೆಯೂ ಇಲ್ಲ ಎಂಬ ಅತಂತ್ರ ಪರಿಸ್ಥಿತಿ ಉಂಟಾಗಿದೆ. ಇನ್ನೂ ಕೆಲವರು ಕೈಯಲ್ಲಿ ಖರ್ಚಿಗೆ ಮಾತ್ರ ಹಣ ಇರಿಸಿಕೊಂಡು ಉಳಿದ ಮೊತ್ತವನ್ನು ಊರಿಗೆ ಕಳುಹಿಸಿಬಿಟ್ಟಿದ್ದಾರೆ. ಹೀಗಾಗಿ ಹಣಕಾಸಿನ ಮುಗ್ಗಟ್ಟನ್ನೂ ಎದುರಿಸುವಂತಾಗಿದೆ. ಈ ಅತಂತ್ರ ಪರಿಸ್ಥಿತಿಯನ್ನು ಅನಿವಾಸಿ ಕನ್ನಡಿಗರು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಅವರ ಗಮನಕ್ಕೆ ತಂದಿದ್ದಾರೆ. ಅವರು ಕೂಡಲೇ ಸ್ಪಂದಿಸಿ ಮಂಗಳೂರು ವಿಮಾನ ನಿಲ್ದಾಣ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಚಿವರೊಂದಿಗೆ ಮಾತುಕತೆ ನಡೆಸಿದ್ದಾರೆ. ಆದರೆ, ರಾಜ್ಯದಿಂದ ಅನುಮತಿ ಸಿಗಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net