ಮುಸಾಪುರ ಬಂಗಲೆಗೆ ಬೇಕಿದೆ ಕಾಯಕಲ್ಪ

FotoJet (1)
Published on

ಸಿ.ಎಸ್​.ವಿಶ್ವನಾಥಶಾಸ್ತ್ರಿ ರಾಯಲ್ಪಾಡು

ದೇಶದಲ್ಲಿ ಬ್ರಿಟಿಷರ ಆಳ್ವಿಕೆ ವೇಳೆ ನಾಡಿಗೆ ಬ್ರಿಟಿಷ್​ ಅಧಿಕಾರಿಗಳು, ಉಸ್ತುವಾರಿಗಳು ಕೊಟ್ಟ ಅಪೂರ್ವ ಕೊಡುಗೆಗಳಿಂದಾಗಿ ಅವರ ಹೆಸರನ್ನು ಕೆಲವು ಊರು, ವಾರ್ಡ್​, ರಸ್ತೆಗೆ ಇಟ್ಟಿರುವುದು ಇಂದಿಗೂ ನಾವು ಕಾಣುತ್ತೇವೆ. ಇದಕ್ಕೆ ಉದಾಹರಣೆ ಎಂಬಂತೆ ಅನಿಬೆಸೆಂಟ್​ರ ಆದಿಯಾಗಿ ಮೈಸೂರು ಒಡೆಯರು, ಅನಂತರದ ಹಲವರು ವಾಸವಿದ್ದ ಒಂದು ಅಪರೂಪದ ಇತಿಹಾಸಕ್ಕೆ ಶ್ರೀನಿವಾಸಪುರ ತಾಲೂಕು ರಾಯಲ್ಪಾಡು ಗ್ರಾಮದ ಮುಸಾಪುರ ಬಂಗಲೆ ಸಾಯಾಗಿದೆ.

ಹೌದು. ಸ್ವಾತ್ರಂತ್ರ$್ಯ ಪೂರ್ವ 1862ರಲ್ಲಿ ಬ್ರಿಟಿಷರು ಮುಸಾಪುರ (ಖಾನ್​) ಬಂಗಲೆ ನಿರ್ಮಿಸಿದ್ದು, ಈ ಕಟ್ಟಡವನ್ನು ಆಗ ಅನಿಬಿಸೆಂಟ್​ ಅವರು ನೆರೆಯ ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ನಿರ್ಮಾನವಾಗುತ್ತಿದ್ದ ಬಿ.ಟಿ. ಕಾಲೇಜಿನ ಕಟ್ಟಡದ ಉಸ್ತುವಾರಿ ನೋಡಿಕೊಳ್ಳುತ್ತಾ ಈ ಬಂಗಲೆಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದರು ಎನ್ನಲಾಗಿದೆ.

ಅನಿಬಿಸೆಂಟ್​ ಮದನಪಲ್ಲಿಗೆ ಓಡಾಡುತ್ತಾ ಪರಿಸರದ ಸೌಂದರ್ಯ ಕಂಡು, ಎರಡನೇ ಕಾಶ್ಮಿರ ಎಂಬುದಾಗಿ ಬಣ್ಣಿಸಿದ್ದರಂತೆ. ಅವರ ಪ್ರತಿಯೊಂದು ಸಭೆಗಳನ್ನು ಇದೇ ಕಟ್ಟಡದಲ್ಲಿ ಆಯೋಜಿಸುವ ಮೂಲಕ ವರ್ಲ್ಡ್​ ಥಿಯೋಸೆಫಿಕಲ್​ ಸೊಸೈಟಿ, ಸೇವಾದಳದ ಕ್ಯಾಂಪ್​ಗಳು, ವರ್ಲ್ಡ್​ ರೆಡ್​ಕ್ರಾಸ್​ ಸಂಸ್ಥೆಯ ಮೀಟಿಂಗ್​ಗಳು ನಡೆದ ಐತಿಹಾಸಿಕ ಹೆಜ್ಜೆ ಗುರುತು ಈ ಕಟ್ಟಡಕ್ಕಿದೆ.

ಸ್ವಾತಂತ್ರ$್ಯ ನಂತರ ರಾಯಲ್ಪಾಡಿನ ಚಂದ್ರಮೌಳೇಶ್ವರ ನಾಟಕ ಮಂಡಳಿ ಆಹ್ವಾನದ ಮೇರೆಗೆ ರಾಜ್ಯದ ಮೊದಲ ಮುಖ್ಯಮಂತ್ರಿ ಚಂಗಲರಾಯರೆಡ್ಡಿ, ಸಚಿವರಾದ ಬಾಷ್ಯಂ, ಸಿದ್ದಲಿಂಗಯ್ಯ ಹಾಗೂ ನಟರಾದ ನಂದಮೂರಿ ತಾರಕ ರಾಮಾರಾವ್​(ಎನ್​ಟಿಆರ್​) ಆಗಮಿಸಿ ನಾಟಕ ವೀಕ್ಷಣೆ ನಂತರ ಇದೇ ಕಟ್ಟಡದಲ್ಲಿ ವಿಶ್ರಾಂತಿ ಪಡೆದಿದ್ದರು. ಅಂದೇ ಡಿಸಿ ಅಧ್ಯಕ್ಷತೆಯಲ್ಲಿ ಪ್ರತಿ ತಿಂಗಳು ಜಮಾಬಂದಿ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳವೂ ಇದಾಗಿತ್ತು.

ನಂತರದ ದಿನಗಳಲ್ಲಿ ಮುಸಾಪುರ ಬಂಗಲೆಯನ್ನು ಗ್ರಾಮದ ಹಿರಿಯರಾದ ದಿ.ಆರ್​.ಜಿ.ನಾರಾಯಣರೆಡ್ಡಿ ಅವರು ತಾಲೂಕು ಬೋರ್ಡ್​ ಹೈಸ್ಕೂಲ್​ ಆಗಿ ಪರಿವರ್ತಿಸಿದರು. ಮೈಸೂರು ಸಂಸ್ಥಾನದ ವ್ಯವಸಾಯ ಸಚಿವರಾಗಿದ್ದ ಜಿ.ನಾರಾಯಣಗೌಡ ಹಾಗೂ 1966ರಲ್ಲಿ ರೆವಿನ್ಯೂ ಸಚಿವ ಎಂ.ವಿ.ಕೃಷ್ಣಪ್ಪ ಅವರು ಹೈಸ್ಕೂಲ್​ನ ಕಟ್ಟಡಕ್ಕೆ ಅಸ್ತಿಭಾರ ಹಾಕಿದ್ದರು.

ಇಂದು ಇದೇ ಆವರಣದಲ್ಲಿ ಸರ್ಕಾರಿ ಪ್ರೌಢಶಾಲೆ ಮತ್ತು ಕಾಲೇಜ್​ಗಳು ಕಾರ್ಯನಿರ್ವಹಿಸುತಿವೆ. ಕಟ್ಟಡದಲ್ಲಿ ಕಾಲೇಜಿನ ಕಚೇರಿ ಕಾರ್ಯನಿರ್ವಹಿಸುತ್ತಿತ್ತು. ತಾಲೂಕು ಬೋರ್ಡ್​ ಸ್ವತ್ತಾಗಿದ್ದು, ನಂತರದ ದಿನಗಳಲ್ಲಿ ಈ ಕಟ್ಟಡವನ್ನು ತಾಲೂಕು ಆಡಳಿತವು ಪ್ರೌಢಶಾಲೆ ಮತ್ತು ಕಾಲೇಜಿನ ಹೆಸರಿಗೆ ಬದಲಾಯಿಸಿ ದುರಸ್ತಿಗಾಗಿ ಕಳೆದ ಸಾಲಿನಲ್ಲಿ ಶಾಸಕರ ಅನುದಾನದಲ್ಲಿ 3ಲಕ್ಷ ರೂ. ಅನುದಾನ ಬಳಸಿಕೊಂಡು ದುರಸ್ತಿ ಕಾರ್ಯ ಹಮ್ಮಿಕೊಳ್ಳುವ ಮೂಲಕ ಪುರಾತನ ಕಟ್ಟಡದ ವೈಭವವನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆದಿದೆ.

ಮಹನೀಯರ ವಿಶ್ರಾಂತಿ ಸ್ಥಳ

ಪ್ರಸಿದ್ಧ ವ್ಯಕ್ತಿಗಳಾದ ಜಿಡ್ಡು ಕೃಷ್ಣಮೂರ್ತಿ, ರುಕ್ಮಿಣಿ ಅರುಂಡೇಲ್​, ಸೇವಾದಳದ ಅಧ್ಯಕ್ಷ ಹರ್ಡೆಕರ್​, ಮೈಸೂರು ಸಂಸ್ಥಾನದ ಜಯಚಾಮರಾಜೇಂದ್ರ ಓಡೆಯರ್​, ಮಾಜಿ ಸಿಎಂ ಕೆಂಗಲ್​ ಹನುಮಂತಯ್ಯ ಅವರು ಈ ಕಟ್ಟಡದಲ್ಲಿ ವಿಶ್ರಾಂತಿ ಪಡೆದಿದ್ದರು. ಒಮ್ಮೆಕ್ಷಾಮದ ಭೀತಿಯಲ್ಲಿದ್ದ ಈ ಭಾಗದ ಜನರಿಗೆ ಇಷ್ಟು ಮಹನೀಯರು ಸೇರಿ ಒಟ್ಟು 1 ಲಕ್ಷ ರೂ. ಪರಿಹಾರ ಒದಗಿಸಿದ್ದರು ಎನ್ನಲಾಗಿದೆ. ಸ್ವಾತ್ರಂತ್ರ$್ಯ ಹೋರಾಟ ನಡೆಸುತ್ತಿದ್ದವರನ್ನು ಈ ಕಟ್ಟಡದಲ್ಲಿ ಬಂಧಿಸಿಟ್ಟು ಚಿತ್ರಹಿಂಸೆ ನೀಡಲಾಗುತ್ತಿತ್ತೆಂದೂ ಹೇಳುತ್ತಾರೆ ಹಿರಿಯರು.

" ಪುರಾತನ ಕಟ್ಟಡದಲ್ಲಿ ಅನೇಕ ಮಹನೀಯರು ವಿಶ್ರಾಂತಿ ಪಡೆದು, ಇಲ್ಲಿನ ಪರಿಸರಕ್ಕೆ ಮಾರು ಹೋಗಿದ್ದರು. ಪ್ರಸ್ತುತ ಕಟ್ಟಡವು ಶಿಥಿಲವಾಗಿದ್ದು, ಶಾಸಕರ ಅನುದಾನ 3ಲಕ್ಷ ರೂ. ವೆಚ್ಚದಲ್ಲಿ ಕಟ್ಟಡಕ್ಕೆ ಸುಣ್ಣಬಣ್ಣ ಹಾಗೂ ಕೆಲ ದುರಸ್ತಿ ಕಾರ್ಯ ಹಮ್ಮಿಕೊಂಡಿದ್ದು, ಕಟ್ಟಡದ ಗತವೈಭವ ಉಳಿಸಿಕೊಳ್ಳಲು ಮತ್ತು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಗಾಗಿ ಡಿಜಿಟಲ್​ ಲೈಬ್ರರಿ ಮಾಡಲು ಎಸ್​ಡಿಎಂಸಿ ಹಾಗೂ ಸಿಬಿಸಿ ಸಮಿತಿ ನಿರ್ಧರಿಸಿವೆೆ."

- ಸಿಮೆಂಟ್​ ನಾರಾಯಣಸ್ವಾಮಿ, ಸಿಬಿಸಿ ಸದಸ್ಯ, (ಶೈಕ್ಷಣಿಕ ಸಲಹೆಗಾರ)

" ಹಳೇ ಕಟ್ಟಡ ವಿಶಿಷ್ಟ ಇತಿಹಾಸ ಹೊಂದಿದೆ. ಈ ಕಟ್ಟಡವನ್ನು ಮುಂದಿನ ಪೀಳಿಗೆಯು ಉಪಯೋಗಿಸಿಕೊಳ್ಳುವ ರೀತಿಯಲ್ಲಿ ಶೈಕ್ಷಣಿಕ ಪ್ರಗತಿಗಾಗಿ ಬಳಸಿಕೊಳ್ಳಲಾಗುವುದು."

- ಶ್ರೀಶೈಲ ಹರವಾಲ, ಪ್ರೌಢಶಾಲೆ, ಮುಖ್ಯ ಶಿಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net