

ಹುಬ್ಬಳ್ಳಿ: ಧರ್ಮದ ವಿಚಾರದಲ್ಲಿ ರಾಜಕಾರಣ ಬೆರೆಸುವುದು ಸರಿಯಲ್ಲ, ಎಷ್ಟೋ ರಾಜಕಾರಣಿಗಳಿಗೆ ಸನಾತನ ಧರ್ಮದ ಬಗ್ಗೆ ಗೊತ್ತಿಲ್ಲ, ಅವರೆಲ್ಲ ಧರ್ಮದ ವಿಷಯದಲ್ಲಿ ಪ್ರವೇಶ ಮಾಡಬಾರದು ಎಂದು ಇಲ್ಲಿಯ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಶ್ರೀ ಮಠದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಹುಟ್ಟಿದಾಗಿನಿಂದ ಸನಾತನ ಧರ್ಮ ಇದೆ. ಸನಾತನವೆಂದರೆ ಅದು ಪುರಾತನವಾದದ್ದು, ಇದು ಯಾರಿಗೂ ತಾರತಮ್ಯ ಮಾಡಿಲ್ಲ. ಇಲ್ಲಿ ಜಾತಿ ವ್ಯವಸ್ಥೆ ಇಲ್ಲ. ಹಿಂದೂ ಧರ್ಮದಲ್ಲಿಯೂ ಜಾತಿ ವ್ಯವಸ್ಥೆ ಇಲ್ಲ, ಹಲವಾರು ಪರಂಪರೆಗಳು ಇವೆ. ಈ ಪರಂಪರೆಯಲ್ಲಿ ಕೆಲ ಕಡೆ ಜಾತಿ ವ್ಯವಸ್ಥೆ ಕಂಡು ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ಇತಿಹಾಸ ತಿಳಿದುಕೊಂಡವರು ಇಲ್ಲಸಲ್ಲದ ಹೇಳಿಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಸನಾತನವನ್ನು ಕಿತ್ತೊಗೆಯಲು ಸಾಧ್ಯವಿಲ್ಲ, ಭಾರತೀಯರ ಪ್ರತಿ ಮನೆಯಲ್ಲಿ ಇದೆ. ಎಲ್ಲ ಧರ್ಮಗಳನ್ನು ಗೌರವಿಸಬೇಕು ಎಂದು ನಮ್ಮ ಸಂವಿಧಾನ ಹೇಳಿದೆ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಸಹ ಸನಾತನವನ್ನು ಅಲ್ಲಗಳೆದಿಲ್ಲ. ಇದನ್ನು ಅರ್ಥ ಮಾಡಿಕೊಂಡು ರಾಜಕಾರಣಿಗಳು ಹೇಳಿಕೆ ಕೊಡಬೇಕು ಎಂದು ಸೂಚಿಸಿದರು.
ಚುನಾವಣೆಗಾಗಿ ಧರ್ಮದ ವಿಚಾರವನ್ನು ಬಳಸಿಕೊಳ್ಳುವ ಪ್ರಯತ್ನ ಮಾಡುತ್ತಿರುವುದು ವಿಪರ್ಯಾಸ. ರಾಜಕಾರಣದಲ್ಲಿ ಏನೂ ಉಳಿದಿಲ್ಲ. ಮತದಾರರು ಬುದ್ಧಿವಂತರಾಗಬೇಕು ಎಂದು ಹೇಳಿದರು.
ಇಂಡಿಯಾ ಶಬ್ದ ಬ್ರಿಟಿಷರು ಭಾರತಕ್ಕೆ ಬಂದ ನಂತರ ಬಂದಿದೆ. ದೇಶ ಹುಟ್ಟಿದಾಗಿನಿಂದ ಭಾರತ ಎಂದೇ ಇದೆ. ಈಗ ಅದನ್ನು ಭಾರತ ಮರು ನಾಮಕರಣ ಮಾಡುವುದರಲ್ಲಿ ತಪ್ಪೇನಿಲ್ಲ. ದೇಶದಲ್ಲಿ ಬ್ರಿಟಿಷರು ಇಟ್ಟಂತಹ ಎಷ್ಟೋ ಹೆಸರುಗಳನ್ನು ಬದಲಾಯಿಸಲಾಗಿದೆ. ಇದೇ ರೀತಿ ಭಾರತ ಎನ್ನುವುದರಲ್ಲಿ ತಪ್ಪೇನಿದೆ ಎಂದರು.