

ಹುಬ್ಬಳ್ಳಿ: ತಂದೆ-ತಾಯಿಗಳ ಮಹತ್ವ, ಮಕ್ಕಳನ್ನು ಬೆಳೆಸುವ ರೀತಿಯಲ್ಲಿ ಕೊರವಿ ಕುಟುಂಬದವರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಮೂರುಸಾವಿರಪ್ಪ ಕೊರವಿ ಅವರ 4ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಡಾ. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ, ನಿರ್ಮಲಾ ಫೌಂಡೇಷನ್ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಗರದ ಉಣಕಲ್ಲನಲ್ಲಿ ಏರ್ಪಡಿಸಿದ್ದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.
ಕೊರವಿ ಅವರು ಸಮಾಜ ಸೇವೆ ಮಾಡುವುದರಲ್ಲಿ ಸದಾ ಮುಂದೆ ಇರುತ್ತಾರೆ. ಪ್ರತಿ ವರ್ಷ ತಂದೆ- ತಾಯಿಯ ಪುಣ್ಯಸ್ಮರಣೆ ನಿಮಿತ್ತ ಉಚಿತ ಆರೋಗ್ಯ ತಪಾಸಣೆ ನಡೆಸುತ್ತಾರೆ. ಈ ಮೂಲಕ ಬಡ ಕುಟುಂಬಗಳಿಗೆ ಸಹಾಯ ಮಾಡಿದ್ದಾರೆ ಎಂದರು.
ಸಾನ್ನಿಧ್ಯ ವಹಿಸಿದ್ದ ಸುಳ್ಳದ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಉಚಿತ ಶಿಬಿರದಿಂದ ಅನೇಕ ಬಡ ಜನರಿಗೆ ಅನುಕೂಲವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಿಬಿರದಲ್ಲಿ 250ಕ್ಕೂ ಹೆಚ್ಚು ಜನ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದರು.
ಅಧ್ಯಕ್ಷತೆ ವಹಿಸಿದ್ದ ನಿರ್ಮಲಾ ಫೌಂಡೇಷನ್ ಅಧ್ಯಕ್ಷ ರಾಜಣ್ಣ ಕೊರವಿ ಮಾತನಾಡಿದರು.
ಶಾಸಕ ಮಹೇಶ ಟೆಂಗಿನಕಾಯಿ, ಮೇಯರ್ ರಾಮಣ್ಣ ಬಡಿಗೇರ, ಚನ್ನು ಪಾಟೀಲ್, ಪಾಲಿಕೆ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ಉಮೇಶ ಕೌಜಗೇರಿ ಇತರರು ಇದ್ದರು. ಡಾ. ವಿಶ್ವನಾಥ ಕೊರವಿ ಕಾರ್ಯಕ್ರಮ ನಿರೂಪಿಸಿದರು.