

ಸುಳ್ಯ: ಜಾಲ್ಸೂರು ಕಾಸರಗೋಡು ರಸ್ತೆ ಮಂಡೆಕೋಲು ಗ್ರಾಮದ ಮುರೂರಿನ ಕೆಲವು ಕಡೆಗಳಲ್ಲಿ ರಸ್ತೆಯಲ್ಲಿ ಬೃಹತ್ ಗಾತ್ರದ ಹೊಂಡ ನಿರ್ಮಾಣಗೊಂಡು, ರಸ್ತೆ ಕುಸಿಯುವ ಭೀತಿ ಹಿನ್ನೆಲೆಯಲ್ಲಿ ಮುರೂರು ಜಂಕ್ಷನ್ನಲ್ಲಿ ಬ್ಯಾರಿಕೇಡ್ ಅಳವಡಿಸಿ, ಪೊಲೀಸರು ರಸ್ತೆ ಬಂದ್ ಮಾಡಿದ್ದಾರೆ.
ಇದರಿಂದಾಗಿ ಜಾಲ್ಸೂರು-ಕಾಸರಗೋಡು ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಗುರುವಾರ ಸಂಜೆ ಸುಳ್ಯ ಭಾಗದಿಂದ ಮರದ ಲೋಡ್ ಹೊತ್ತೊಯ್ಯುತ್ತಿದ್ದ ಲಾರಿಯೊಂದು ಮುರೂರಿನ ಬಳಿ ಮುಖ್ಯರಸ್ತೆ ಮಧ್ಯೆ ಬಾಯ್ದೆರೆದು ನಿಂತಿದ್ದ ಭಾರಿ ಗಾತ್ರದ ಹೊಂಡಕ್ಕೆ ಬಿದ್ದು, ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ರಾತ್ರಿ ವೇಳೆ ಅದನ್ನು ತೆರವುಗೊಳಿಸಿ, ವಾಹನ ಸಂಚಾರ ಪ್ರಾರಂಭಗೊಂಡಾಗ ಮತ್ತದೇ, ಗುಂಡಿಯಲ್ಲಿ ಬೇರೊಂದು ಲಾರಿ ಚಕ್ರ ಹೂತು ಹೋಗಿದೆ.
ರಸ್ತೆ ಎಡಭಾಗದಲ್ಲಿ ಪಯಸ್ವಿನಿ ನದಿ ತುಂಬಿ ಹರಿಯುತ್ತಿದ್ದು, ಹೊಂಡ ಮತ್ತಷ್ಟು ಬಾಯ್ದೆರೆದು, ರಸ್ತೆ ಕುಸಿಯುವ ಭೀತಿಯಿಂದ ಪೊಲೀಸರು ಮುರೂರು ಜಂಕ್ಷನ್ನಲ್ಲಿ ಬ್ಯಾರಿಕೇಡ್ ಅಳವಡಿಸಿ, ರಸ್ತೆ ಬಂದ್ ಮಾಡಿದ್ದಾರೆ. ಇದೀಗ ಜಾಲ್ಸೂರು-ಕಾಸರಗೋಡು ರಸ್ತೆ ಸಂಚಾರ ಬಂದ್ ಆಗಿರುವ ಹಿನ್ನೆಲೆಯಲ್ಲಿ ಸುಳ್ಯ ಭಾಗದಿಂದ ಕಾಸರಗೋಡಿಗೆ ಹೋಗುವ ಪ್ರಯಾಣಿಕರು ಮಂಡೆಕೋಲು-ಅಡೂರು- ಕೊಟ್ಯಾಡಿ-ಮುಳ್ಳೇರಿಯಾದ ಮೂಲಕ ಹಾಗೂ ಕಾಸರಗೋಡಿನಿಂದ ಸುಳ್ಯ ಬರುವ ಪ್ರಯಾಣಿಕರು ಮುಳ್ಳೇರಿಯಾ-ಕೊಟ್ಯಾಡಿ- ಅಡೂರು-ಮಂಡೆಕೋಲು ಆಗಿ ಸುಳ್ಯಕ್ಕೆ ಪ್ರಯಾಣಿಸಬೇಕಾಗಿದೆ.
ವಿಪರೀತ ಮಳೆ ಕಾರಣದಿಂದಲೋ ಅಥವಾ ಟವರ್ ಸಮಸ್ಯೆ ಕಾರಣವೋ ತಾಲೂಕು ಕೇಂದ್ರದ ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆ ಕಳೆದೆರಡು ದಿನಗಳಿಂದ ಹೆಚ್ಚಾದಂತೆ ಕಂಡು ಬರುತ್ತಿದೆ.
ಸುಳ್ಯ ನಗರದ ಜಯನಗರ, ಹಳೇಗೇಟು ಭಾಗದಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆ ತೀವ್ರಗೊಂಡಿದ್ದು, ಕಳೆದ ಕೆಲವು ದಿನಗಳಿಂದ ಗ್ರಾಹಕರಿಗೆ ಸಮಸ್ಯೆ ಎದುರಾಗಿದೆ. ಜಯನಗರ, ಹಳೆಗೇಟು ಭಾಗದಲ್ಲಿ ನೆಟ್ವರ್ಕ್ ಸಮಸ್ಯೆ ಹೆಚ್ಚಾಗಿದ್ದು, ಗ್ರಾಹಕರಿಗೆ ಕರೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಪದೇ ಪದೇ ನೆಟ್ವರ್ಕ್ ಕಡಿತವಾಗುವುದು, ಕರೆ ಮಾಡಿ ಮಾತನಾಡುತ್ತಿದ್ದಂತೆ ಅರ್ಧಕ್ಕೆ ಕಾಲ್ ಕಟ್ ಆಗುತ್ತಿದೆ. ಇದರಿಂದಾಗಿ ಬಳಕೆದಾರರು ಸರ್ಕಾರದ ಬಿಎಸ್ಎನ್ಎಲ್ ತೊರೆದು ಇತರ ಖಾಸಗಿ ನೆಟ್ವರ್ಕ್ ನ ಬಳಕೆ ಮಾಡುವ ಯೋಚನೆಯಲ್ಲಿದ್ದಾರೆ.