ರಸ್ತೆ ಸರಿ ಪಡಿಸದಿದ್ದಲ್ಲಿ ಮೂರ್ನಾಡು ಬಂದ್

6mdks3 - Copy
Published on

ಮೂರ್ನಾಡು: ಕುಂಬಳದಾಳು, ಹೊದ್ದೂರು, ಮೂರ್ನಾಡು ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕು. ತಪ್ಪಿದಲ್ಲಿ ಮೂರ್ನಾಡು ಬಂದ್‌ಗೆ ಕರೆ ನೀಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು, ಗ್ರಾಮದ ರಸ್ತೆ ಅವ್ಯವಸ್ಥೆ ಬಗ್ಗೆ ವಿವರಿಸಿದರು. ಮೂರ್ನಾಡು, ಕುಂಬಳದಾಳು ಪ್ರವೇಶಿಸುವ ರಸ್ತೆ ಅಗೆದು ಹಾಕಿ ವರ್ಷಗಳೇ ಕಳೆದಿದ್ದರು ಇಲ್ಲಿಯವರೆಗೆ ಡಾಂಬರೀಕರಣ ಮಾಡಿಲ್ಲ. ಮೂರ್ನಾಡು ಪಟ್ಟಣದಲ್ಲಿ ಚರಂಡಿ ಕಿತ್ತು ಹಾಕಲಾಗಿದೆ. ಇದರಿಂದ ಪಾದಚಾರಿಗಳು ಮತ್ತು ಶಾಲಾ ಮಕ್ಕಳು ಚರಂಡಿಯಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಆದ್ದರಿಂದ ತಕ್ಷಣ ರಸ್ತೆ ಡಾಮಬರೀಕರಣ ಮತ್ತು ಚರಂಡಿ ದುರಸ್ತಿ ಮಾಡಬೇಕೆಂದು ಒತ್ತಾಯಿಸಿದರು.

ಕುಂಬಳದಾಳು ರಸ್ತೆಯಿಂದ ಕೊಡವ ಸಮಾಜದವರೆಗೆ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲ್ಲಿಸುವುದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಕೊಡವ ಸಮಾಜದಲ್ಲಿ ಸಮಾರಂಭ ನಡೆಯುವ ಸಂದರ್ಭ ರಸ್ತೆಯಲ್ಲಿ ಏಕಮುಖ ಪಾರ್ಕಿಂಗ್ ವ್ಯವಸ್ಥೆ ಮಾಡ ಬೇಕು, ಮುಖ್ಯದ್ವಾರ ಬಳಿ ಬಸ್ಸು ಮತ್ತು ಲಾರಿ ಸಂಚಾರಕ್ಕೆ ಅಡಚಣೆಯಾಗಿರುವ ವಿದ್ಯುತ್ ಕಂಬ ತಕ್ಷಣ ತೆರವುಗೊಳಿಸಬೇಕೆಂದು ಆಗ್ರಹಿಸಿದರು.

ಕುಂಬಳದಾಳು ಜ್ಞಾನ ಜ್ಯೋತಿ ಶಾಲೆ ಬಳಿ ರಸ್ತೆ ಬದಿ ನಿಂತಿರುವ ಹಳೆಯ ವಾಹನಗಳಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇವುಗಳನ್ನು ತೆರವು ಗೊಳಿಸಲು ಕ್ರಮಕೈಗೊಳ್ಳಬೇಕು. ಮೂರ್ನಾಡು, ಹೊದ್ದೂರು ನಾಪೋಕ್ಲು ರಸ್ತೆ ಕಳೆದ ೭ ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದ್ದು, ಸ್ಥಳ ಪರೀಶಿಲಿಸಿ ತಕ್ಷಣ ಡಾಂಬರೀಕರಣ ಮಾಡಬೇಕೆಂದು ಒತ್ತಾಯಿಸಿದರು.

ಈ ಬೇಡಿಕೆಗಳಿಗೆ ಮುಂದಿನ ಒಂದು ತಿಂಗಳೊಳಗೆ ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ ಮೂರ್ನಾಡು ಬಂದ್ ಮಾಡಿ ಮೌನ ಮೆರವಣಿಗೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು. ಗ್ರಾಮದ ಪ್ರಮುಖರಾದ ತೆಕ್ಕಡೆ ಸುಗು ಗಣಪತಿ, ಕೂಡಂಡ ಪೃಥ್ವಿ, ತೆಕ್ಕಡೆ ಸುನಂದ, ದಂಬೆಕೋಡಿ ಈಶ್ವರ, ತೆಕ್ಕಡೆ ಪೂರ್ಣೇಶ್, ಚೆಟ್ಟಿಮಾಡ ಪ್ರಶಾಂತ್, ದೇವಜನ ವಿಖ್ಯಾತ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net