ಆ.8ಕ್ಕ ಮಲ್ಲಿಕಾರ್ಜುನ ಶ್ರೀಗಳ 32ನೇ ಸ್ಮರಣೋತ್ಸವ

CTD ONTIKAMBA-=
Published on

ಚಿತ್ರದುರ್ಗ: ಮುರುಘಾಮಠದ ಲಿಂ. ಜಗದ್ಗುರು ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಅವರ 32ನೇ ಸ್ಮರಣೋತ್ಸವವನ್ನು ಹೊಳಲ್ಕೆರೆ ಒಂಟಿ ಕಂಬದ ಮುರುಘಾ ಮಠದಲ್ಲಿ ಆ.8ರಂದು ಹಮ್ಮಿಕೊಳ್ಳಲಾಗಿದೆ ಎಂದು ಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು.

ಒಂಟಿಕಂಬದ ಮಠದಲ್ಲಿ ಶನಿವಾರ ಆಯೋಜಿಸಿದ್ದ ಸ್ಮರಣೋತ್ಸವ ಪೂರ್ವಭಾವಿ ಸಭೆಯ ಸಾನ್ನಿಧ್ಯವಹಿಸಿ ಮಾತನಾಡಿ, ಈ ಕಾರ್ಯಕ್ರಮದ ಮೂಲಕ ಲಿಂಗೈಕ್ಯ ಹಿರಿಯ ಶ್ರೀಗಳ ಸೇವೆಯನ್ನು ಸ್ಮರಿಸಬೇಕಿದೆ. ಅವರು 1964ರಲ್ಲಿ ಎಸ್‌ಜೆಎಂ ವಿದ್ಯಾಪೀಠ ಸ್ಥಾಪಿಸಿ ನಾನಾ ಶಾಲಾ, ಕಾಲೇಜುಗಳ ಆರಂಭಕ್ಕೆ ಕಾರಣರಾಗಿದ್ದಾರೆ ಎಂದರು.

ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿ ಮಾತನಾಡಿ, ಈ ಬಾರಿಯೂ ಮಲ್ಲಿಕಾರ್ಜುನ ಶ್ರೀಗಳ ಸ್ಮರಣೋತ್ಸವ ಆಚರಿಸಲು ಶ್ರೀಮಠದ ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದರು.

ಶಾಸಕ ಡಾ.ಎಂ. ಚಂದ್ರಪ್ಪ ಮಾತನಾಡಿ, ಮಲ್ಲಿಕಾರ್ಜುನ ಶ್ರೀಗಳು ಸಂಸ್ಥಾನವನ್ನು ಕಟ್ಟಿ ಬೆಳೆಸಿ ಶಾಲಾ, ಕಾಲೇಜುಗಳ ಸ್ಥಾಪಿಸುವ ಮೂಲಕ ನಾಡಿನಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದ್ದಾರೆ. ಆಧ್ಯಾತ್ಮ, ಧಾರ್ಮಿಕ, ಸಾಮಾಜಿಕವಾಗಿ ಅವರ ಘನತೆ, ಗಾಂಭಿರ್ಯ ಮತ್ತು ಪ್ರೌಢಿಮೆಯಿಂದ ಮೇರು ವ್ಯಕ್ತಿತ್ವವುಳ್ಳವರಾಗಿದ್ದರು. ಅಂಥ ಪೂಜ್ಯರನ್ನು ಸದಾ ಸ್ಮರಿಸಿಕೊಳ್ಳುತ್ತ ಗೌರವ ಸಲ್ಲಿಸುವಂತಾಗಬೇಕು. ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ನಿಪ್ಪಾಣಿಯ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಮುರುಘೇಂದ್ರ ಸ್ವಾಮೀಜಿ, ಶ್ರೀ ತಿಪ್ಪೇರುದ್ರ ಸ್ವಾಮೀಜಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಾಧುರಿ ಗಿರೀಶ್, ಕೆಇಬಿ ಷಣ್ಮುಖಪ್ಪ ಇತರರು ಇದ್ದರು. ಮುರುಘೇಶ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net