ಜಾಗತಿಕ ಶಾಂತಿ, ಪ್ರಗತಿಗಾಗಿ ಶಿವಯೋಗ ಸಂಭ್ರಮ: ಪ್ರಮಥರ ಗಣಮೇಳ ಇಂದು

Shivayoga
Published on

ನೆಲಮಂಗಲ: ತುಮಕೂರು ರಸ್ತೆಯ ನಂದಿ ಗ್ರೌಂಡ್ಸ್​ನಲ್ಲಿ ಫೆ.16ರಂದು ಜಾಗತಿಕ ಶಾಂತಿ ಹಾಗೂ ಪ್ರಗತಿಗಾಗಿ ಆಯೋಜಿಸಿರುವ ಶಿವಯೋಗ ಸಂಭ್ರಮ, ಅಸಂಖ್ಯ ಪ್ರಮಥರ ಗಣಮೇಳ ಹಾಗೂ ಸರ್ವ ಶರಣರ ಐತಿಹಾಸಿಕ ಸಮ್ಮೇಳನದ ಸಿದ್ಧತೆಗಳು ಪೂರ್ಣಗೊಂಡಿವೆ.

ಸಮ್ಮೇಳನದ ಪ್ರಮುಖ ವೇದಿಕೆ, ಶಿವಯೋಗ ಸಂಭ್ರಮ ನಡೆಯುವ ವೇದಿಕೆ, ಊಟದ ಸ್ಥಳಗಳಿಗೆ ಶನಿವಾರ ಭೇಟಿ ನೀಡಿದ ಚಿತ್ರದುರ್ಗ ಮುರುಘಾಮಠದ ಡಾ. ಶ್ರೀ ಶಿವಮೂರ್ತಿ ಮುರುಘಾಶರಣರು ಹಾಗೂ ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಸಿದ್ಧತೆ ಪರಿಶೀಲಿಸಿದರು.

ಶಿವಯೋಗ ಸಂಭ್ರಮ: ಸಮ್ಮೆಳನದ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಭಾನುವಾರ ಬೆಳಗ್ಗೆ 7.45ಕ್ಕೆ ಶಿವಯೋಗ ಸಂಭ್ರಮ ಶೀರ್ಷಿಕೆಯಡಿ ಸಾಮೂಹಿಕ ಇಷ್ಟಲಿಂಗಪೂಜೆ, ಲಿಂಗಧಾರಣೆ ಆಯೋಜಿಸಿದ್ದು, ಡಾ.ಶಿವಮೂರ್ತಿ ಮುರುಘಾಶರಣರು ಉದ್ಘಾಟಿಸಲಿದ್ದಾರೆ. ಬಿಬಿಎಂಪಿ ಮೇಯರ್ ಎಂ.ಗೌತಮ್ುಮಾರ್ ಧ್ವಜಾರೋಹಣ ನೆರವೇರಿಸಲಿದ್ದಾರೆ.

ಬೆಳಗ್ಗೆ 10.30ಕ್ಕೆ ಪ್ರಮಥರ ಗಣಮೇಳ ಹಾಗೂ ಸರ್ವಶರಣರ ಸಮ್ಮೇಳನವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಡಿಸಿಎಂಗಳಾದ ಗೋವಿಂದಕಾರಜೋಳ, ಡಾ.ಸಿ.ಎನ್.ಅಶ್ವತ್ಥನಾರಾಯಣ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಸದಾನಂದಗೌಡ, ಸುರೇಶ್ ಅಂಗಡಿ, ಸಚಿವರಾದ ಬಸವರಾಜ ಬೊಮ್ಮಾಯಿ, ಸೋಮಣ್ಣ, ಬಿ.ಶ್ರೀರಾಮುಲು ಮತ್ತಿತರರು ಭಾಗವಹಿಸಲಿದ್ದಾರೆ.

ಡಾ.ಶಿವಮೂರ್ತಿ ಮುರುಘಾಶರಣರು ಅಧ್ಯಕ್ಷತೆ ವಹಿಸಿದರೆ, ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಗದಗದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ, ಹುಬ್ಬಳ್ಳಿ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ಆರ್ಟ್​ಆಫ್ ಲಿವಿಂಗ್ ಶ್ರೀ ಶ್ರೀ ರವಿಶಂಕರ ಗುರೂಜಿ, ಕನಕಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಮತ್ತಿತರ ಸ್ವಾಮೀಜಿಗಳು ಸಾನಿಧ್ಯ ವಹಿಸಲಿದ್ದಾರೆ.

ಸಂಗೀತ ಸಂಭ್ರಮ

ಮಧ್ಯಾಹ್ನ 3ಕ್ಕೆ ಸರ್ವ ಶರಣ ಸಮ್ಮೇಳನದ ಪ್ರಯುಕ್ತ ಸಂಗೀತ ಸಂಭ್ರಮ ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವ ಎಸ್.ಟಿ.ಸೋಮಶೇಖರ್, ಸಂಸದೆ ಶೋಭಾ ಕರಂದ್ಲಾಜೆ ಮತ್ತಿತರರು ಭಾಗವಹಿಸಲಿದ್ದಾರೆ. ಖ್ಯಾತ ಹಿನ್ನೆಲೆ ಗಾಯಕ ವಿಜಯಪ್ರಕಾಶ್ ಸಂಗೀತ ಸಂಭ್ರಮ ನಡೆಸಿಕೊಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net