

ಬೈಂದೂರು: ಮೂರ್ತೆದಾರರ ಸೇವಾ ಸಹಕಾರಿ ಸಂಘವು ಪ್ರಸಕ್ತ ಸಾಲಿನಲ್ಲಿ 129.93 ಕೋಟಿ ವ್ಯವಹಾರ ರೂ. ನಡೆಸಿದ್ದು, 37.29 ಲಕ್ಷ ರೂ.ಲಾಭಗಳಿಸಿದೆ. ಮುಂದಿನ ದಿನಗಳಲ್ಲಿ 150 ಕೋಟಿ ರೂ. ವ್ಯವಹಾರದ ಗುರಿ ಹೊಂದಿದೆ ಎಂದು ಅಧ್ಯಕ್ಷ ಮೋಹನ ಪೂಜಾರಿ ಹೇಳಿದರು.
ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ಭಾನುವಾರ ಸಂಘದ 33ನೇ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘ ಪ್ರಾರಂಭದಿಂದಲೂ ಲಾಭದಲ್ಲೇ ಮುನ್ನಡೆಯುತ್ತಿದ್ದು, ಕಳೆದ 32 ವರ್ಷಗಳಿಂದ ನಿರಂತರ ಡಿವಿಡೆಂಡ್ ನೀಡಿರುವ ಹೆಗ್ಗಳಿಕೆಯಿದೆ. ಈ ಬಾರಿ ಶೇ.12 ಡಿವಿಡೆಂಡ್ ನೀಡಲು ಆಡಳಿತ ಮಂಡಳಿ ನಿರ್ಣಯಿಸಿದೆ. ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ರಚನೆಯಾದ ಕಲ್ಪತರು ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರಿಗೆ ಮಾಹಿತಿ ಶಿಬಿರ ಹಾಗೂ ಸಾಲ ಸೌಲಭ್ಯ ನೀಡಿ ಈ ಮೂಲಕ ವ್ಯವಹಾರ ಹೆಚ್ಚಿಸಲಾಗುವುದು. ವರದಿ ವರ್ಷದ ಅಂತ್ಯಕ್ಕೆ ಒಟ್ಟು 173 ಕಲ್ಪತರು ಮಹಿಳಾ ಸ್ವ ಸಹಾಯ ಗುಂಪುಗಳನ್ನು ಹೊಂದಿದ್ದು, ಮಹಿಳಾ ಸಶಕ್ತೀಕರಣಕ್ಕೆ ಆದ್ಯತೆ ನೀಡಿದ್ದು, ಸ್ವಸಹಾಯ ಗುಂಪುಗಳ ಸಾಲದಲ್ಲಿ ಶೇ.99.03ರಷ್ಟು ವಸೂಲಾತಿ ಆಗಿದೆ ಎಂದರು.
ಸಂಘದ ಸಿಇಒ ಮಹೇಶ್ ಎಚ್. ವಾರ್ಷಿಕ ಲೆಕ್ಕ ಪರಿಶೋಧನಾ ವರದಿ, ಮುಂದಿನ ಸಾಲಿನ ಆಯ-ವ್ಯಯ ಬಜೆಟ್ ಹಾಗೂ ಮುಂದಿನ ಸಾಲಿನ ಯೋಜಿತ ಕಾರ್ಯಕ್ರಮಗಳನ್ನು ಮಂಡಿಸಿ ಅನುಮೋದನೆ ಪಡೆದರು. ಸಂಘದ ನಿರ್ದೇಶಕರಾದ ಎಚ್.ನರಸಿಂಹ ಪೂಜಾರಿ, ಬಿ.ನಾರಾಯಣ ಪೂಜಾರಿ, ಮಂಜ ಪೂಜಾರಿ, ರಾಜು ಪೂಜಾರಿ, ಸುರೇಶ ಪೂಜಾರಿ, ಸಂತೋಷ್, ಶಾರದಾ, ಲಕ್ಷ್ಮೀ ಉಪಸ್ಥಿತರಿದ್ದರು. ಉಪಾಧ್ಯಕ್ಷ ತಿಮ್ಮಪ್ಪ ಪೂಜಾರಿ ವಂದಿಸಿದರು.
ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಅರುಣ್‌ಕುಮಾರ್ ಎಸ್.ವಿ., ಸಹಕಾರ ಸಂಘಗಳ ನಿವೃತ್ತ ಲೆಕ್ಕಪರಿಶೋಧನಾ ಉಪನಿರ್ದೇಶಕ ಯು.ಗಣೇಶ ಮಯ್ಯ ಹಾಗೂ ನಿವೃತ್ತ ಯೋಧ ವೆಂಕಟೇಶ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ವಿತರಿಸಲಾಯಿತು.