

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕೊಡವ ಸಮಾಜಗಳ ಒಕ್ಕೂಟದಿಂದ ಆಯೋಜಿಸಿದ್ದ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಮೂರ್ನಾಡು ಕೊಡವ ಸಮಾಜ ಹಾಕಿ ತಂಡ ವನ್ನು ಹಾಕಿ ಕೂರ್ಗ್ ಸಂಸ್ಥೆ ಅಮಾನತುಗೊಳಿಸಿರುವುದು ಖಂಡನೀಯ ಎಂದು ಮೂರ್ನಾಡು ಕೊಡವ ಸಮಾಜ ಅಧ್ಯಕ್ಷ ನೆರವಂಡ ಅನೂಪ್ ಉತ್ತಯ್ಯ ಹೇಳಿದರು.
ಬಾಳುಗೋಡಿನಲ್ಲಿ ನ.೧೭ ರಿಂದ ೨೦ ರವರೆಗೆ ಆಯೋಜಿಸಿದ್ದ ೮ನೇ ವರ್ಷದ ಕೊಡವ ನಮ್ಮೆಯ ಪ್ರಯುಕ್ತ ನಡೆದ ಅಂತರ ಕೊಡವ ಸಮಾಜಗಳ ಹಾಕಿ ಪಂದ್ಯಾವಳಿಯಲ್ಲಿ ಮೂರ್ನಾಡು ಕೊಡವ ಸಮಾಜದ ೧೦ ಆಟಗಾರರು ಸೇರಿದಂತೆ ೧೪ ಆಟಗಾರರು ಮತ್ತು ಶ್ರೀಮಂಗಲ ತಂಡವನ್ನು ಹಾಕಿ ಕೂರ್ಗ್ ಸಂಸ್ಥೆ ಯಾವುದೇ ಮಾಹಿತಿ ನೀಡದೆ ೧ ವರ್ಷ ಅಮಾನತು ಮಾಡಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತ ಪಡಿಸಿದರು.
ಆಟಗಾರರಿಗೆ ನೋಟಿಸ್ ನೀಡದೆ ಏಕಾಏಕಿ ಅಮಾನತು ಮಾಡಿ ಪತ್ರಿಕೆಗಳಿಗೆ ಹೇಳಿಕೆ ನೀಡಿರುವುದು ಖಂಡನೀಯ. ಹಾಕಿ ಕೂರ್ಗ್ ಸಂಸ್ಥೆ ಆಸಕ್ತ ಕ್ರೀಡಾಪಟುಗಳ ಕ್ರೀಡಾ ಬೆಳವಣಿಗೆಗೆ ಪೂರಕವಾದ ಕ್ರಮಕೈಗೊಳ್ಳಬೇಕೆ ಹೊರತು ವ್ಯತಿರಿಕ್ತವಾಗಿ ನಡೆದುಕೊಳ್ಳಬಾರದು. ತಮ್ಮ ಸ್ವಪ್ರತಿಷ್ಠೆ ಮತ್ತು ಸ್ವಾರ್ಥಕ್ಕಾಗಿ ಸಂಸ್ಥೆ ಬಳಸಿಕೊಳ್ಳಬಾರದೆಂದು. ತಿಳಿಯದೆ ಆದ ತಪ್ಪಿಗೆ ಲಿಖಿತ ರೂಪದಲ್ಲಿ ತಾವು ಕ್ಷಮೆ ಕೋರಿದ್ದರೂ ಅಮಾನತುಗೊಳಿಸುವಂತಹ ಕಠಿಣ ಕ್ರಮಕೈಗೊಂಡಿರುವುದು ಯಾವ ಸಾಧನೆಗಾಗಿ ಎಂದು ಪ್ರಶ್ನಿಸಿದರು.
ಬಾಳುಗೋಡು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಹಾಕಿ ಕೂರ್ಗ್ ಸಂಸ್ಥೆಯಿಂದ ಅನುಮತಿ ಪಡೆದಿಲ್ಲ ಎನ್ನುವ ಕಾರಣಕ್ಕಾಗಿ ಅಮಾನತು ಕ್ರಮಕೈಗೊಳ್ಳುವ ಮೂಲಕ ಅಮಾಯಕ ಆಟಗಾರರಿಗೆ ಅನ್ಯಾಯ ಮಾಡಲಾಗಿದೆ. ಕ್ರೀಡೆ ಎಂಬುದು ಬಾಂಧವ್ಯ ಬೆಸೆಯಲು ಇರುವ ಕ್ಷೇತ್ರವೇ ಹೊರತು ಸ್ವಾರ್ಥ ಸಾಧನೆಗಾಗಿ ಅಲ್ಲ. ಹಾಕಿ ಕೂರ್ಗ್ ಸಂಸ್ಥೆ ಕೊಡಗಿನ ಎಲ್ಲಾ ಹಾಕಿ ಆಟಗಾರರನ್ನು ತನ್ನ ಅಧೀನದಲ್ಲಿ ನೋಂದಾಯಿಸಿಕೊಂಡು ಇಲ್ಲದ ನೀತಿ ನಿಯಮಗಳನ್ನು ಆಟಗಾರರ ಮೇಲೆ ಹೇರಿ ಕ್ರೀಡಾ ಭವಿಷ್ಯ ಹಾಳು ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಮುಂದಿನ ದಿನಗಳಲ್ಲಿ ಕ್ರೀಡಾಪಟುಗಳು ಎಚ್ಚೆತ್ತುಕೊಂಡು ಸಂಸ್ಥೆಯ ಹಿಡಿತದಿಂದ ಹೊರ ಬರುವುದು ಸೂಕ್ತ. ಆಟಗಾರರ ಭವಿಷ್ಯದ ದೃಷ್ಟಿ ಯಿಂದ ಅಮಾನತುಗೊಂಡ ಆಟಗಾರರ ಪರವಾಗಿ ಹೈಕೋರ್ಟ್ ಹಿರಿಯ ವಕೀಲ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಮೂಲಕ ಹೈಕೋರ್ಟ್ ನಿಂದ ತಡೆಯಾಜ್ಞೆ ಪಡೆಯಲಾಗಿದೆ. ಇದಕ್ಕೆ ವಕೀಲ ಅಚ್ಚಪಂಡ ಗಿರಿ ಉತ್ತಪ್ಪ ಸಹಕರಿಸಿದ್ದಾರೆಂದರು.
ಕೊಡಗು ಹೆಚ್ಚಿನ ಆಟಗಾರರನ್ನು ಭಾರತ ತಂಡಕ್ಕೆ ನೀಡಿರುವ ಪುಟ್ಟ ಜಿಲ್ಲೆ. ಇಲ್ಲಿನ ಬಾಲಕ, ಬಾಲಕಿಯರು ತಮ್ಮ ಪ್ರಾಥಮಿಕ ಶಿಕ್ಷಣದಲ್ಲೇ ಹಾಕಿ ಆಟವನ್ನು ಜೀವನದ ಒಂದು ಭಾಗವಾಗಿ ಪರಿಗಣಿಸಿ ಹೆಚ್ಚಿನ ಸಮಯ ವಿನಿಯೋಗಿಸುತ್ತಾರೆ. ಹಿಂದಿನಿಂದಲೂ ಹಿರಿಯರು ಎಲ್ಲಾ ಬಾಲಕ, ಬಾಲಕಿಯರನ್ನು ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರಣೆ ನೀಡಿ ಪ್ರೋತ್ಸಾಸುತ್ತಾ ಬಂದಿದ್ದಾರೆ. ಅಲ್ಲದೆ ಅಗತ್ಯ ಸಹಕಾರ ನೀಡಿದ್ದಾರೆ.
ಹಾಕಿ ಆಟಗಾರರ ಕ್ರೀಡಾ ಬೆಳವಣಿಗೆಗಾಗಿ ಹಾಕಿ ಕೂರ್ಗ್ ಸಂಸ್ಥೆ ರಚನೆಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಆಟಗಾರರ ಭವಿಷ್ಯ ಹಾಳು ಮಾಡುವ ಕಾರ್ಯ ನಡೆಯುತ್ತಿದೆ ಎನ್ನುವ ಸಂಶಯ ಮೂಡುತ್ತಿದೆ ಎಂದು ಅನೂಪ್ ಉತ್ತಯ್ಯ ಆರೋಪಿಸಿದರು.
ಹಾಕಿ ಆಟಗಾರ ಚೌರೀರ ನಿರನ್ ಮಂದಣ್ಣ ಮಾತನಾಡಿ, ಹಾಕಿ ಕೂರ್ಗ್ ಸಂಸ್ಥೆ ಜಾರಿಗೆ ತಂದಿರುವ ನಿಯಮಗಳನ್ನು ಆಟಗಾರರಿಗೆ ಮನವರಿಕೆ ಮಾಡಿಕೊಟ್ಟಿದೆಯೇ, ಜಿಲ್ಲೆಯ ಹಾಕಿ ಪಟುಗಳ ಬೆಳವಣಿಗೆಗೆ ಈ ಸಂಸ್ಥೆ ಏನು ಕೊಡುಗೆ ನೀಡಿದೆ ಎಂದು ಪ್ರಶ್ನಿಸಿದರು.
ಮೂರ್ನಾಡು ಕೊಡವ ಸಮಾಜ ಕಾರ್ಯದರ್ಶಿ ಕಂಬೀರಂಡ ಗೌತಮ್, ಸದಸ್ಯರಾದ ಚೌರೀರ ಸೋಮಣ್ಣ, ಚೌರೀರ ಶ್ಯಾಮ್ ಗಣಪತಿ ಗೋಷ್ಠಿಯಲ್ಲಿದ್ದರು.