ಚಾಂಪಿಯನ್ ಪಟ್ಟ ಅಲಂಕರಿಸಿದ ಎಂ. ಬಾಡಗ

28mdkn4 - Copy
Published on

ವಿಜಯವಾಣಿ ಸುದ್ದಿಜಾಲ ಮೂರ್ನಾಡು


ಎಂ ಬಾಡಗ ಸ್ಪೋಟ್ಸ್ ಮತ್ತು ಕಲ್ಚರಲ್ ಕ್ಲಬ್ ವತಿಯಿಂದ ಬಾಚೆಟ್ಟೀರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಗ್ರಾಮಾಂತರ ಹಿಂದೂ ಹಾಕಿ ಪಂದ್ಯಾವಳಿಯ ಚಾಂಪಿಯನ್ ತಂಡವಾಗಿ ಎಂ.ಬಾಡಗ (ಎ) ತಂಡ ಹೊರಹೊಮ್ಮಿತ್ತು. ಕಿರುಂದಾಡು ತಂಡ ದ್ವಿತೀಯ ಸ್ಥಾನ ಪಡೆಯಿತು.

೨೩ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಎಂ.ಬಾಡಗ ತಂಡದ ರಮೇಶ್ ಗೋಲಾಗಿ ಪರಿವರ್ತಿಸಿ ತಂಡದ ಖಾತೆ ತೆರೆದರು. ೪೪ನೇ ನಿಮಿಷಕ್ಕೆ ಕಿರುಂದಾಡು ಪರ ಕವನ್ ಚೊಚ್ಚಲ ಗೋಲು ಬಾರಿಸುವ ಮೂಲಕ ಉಭಯ ತಂಡಗಳು ಸಮಬಲ ಸಾಧಿಸು ವಂತೆ ಮಾಡಿದರು. ನಿಗದಿತ ಅವಧಿ ಪೂರ್ಣಗೊಳ್ಳುವ ಹೊತ್ತಿಗೆ ಎರಡು ತಂಡಗಳು ೧-೧ ಸಮಬಲ ಸಾಧಿಸಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಬಾಡಗ ತಂಡ ೩-೧ ಗೋಲಿನ ಗೆಲುವು ಸಾಧಿಸಿತು. ಬಾಡಗ ಪರ ಮಯೂರ್, ಬೋಪಣ್ಣ, ರಮೇಶ್, ಕಿರುಂದಾಡು ಪರ ಕವನ್ ಗೋಲು ದಾಖಲಿಸಿದರು.

ಪ್ರಥಮ ಸ್ಥಾನ ಪಡೆದ ತಂಡಕ್ಕೆ ೭೫ ಸಾವಿರ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ೫೦ ಸಾವಿರ ರೂ. ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿ ನೀಡಲಾಯಿತು. ಸೆಮಿಫೈನಲ್ನಲ್ಲಿ ಸೋಲು ಅನುಭವಿಸಿ ೪ನೇ ಸ್ಥಾನ ಪಡೆದ ಚೆಂಬೆಬೆಳ್ಳೂರು ಹಾಗೂ ೩ನೇ ಸ್ಥಾನ ಪಡೆದ ನಾಪೋಕ್ಲು ತಂಡಕ್ಕೆ ತಲಾ ೨೦ ಸಾವಿರ ರೂ. ನಗದು ಹಾಗೂ ಟ್ರೋಫಿ ನೀಡಲಾಯಿತು.

ವೈಯುಕ್ತಿಕ ಪ್ರಶಸ್ತಿ
ಬೆಸ್ಟ್ ಗೋಲುಕೀಪರ್ ಆಗಿ ಕಿರುಂದಾಡು ತಂಡದ ಬಾದುಮಂಡ ಮನು, ಬೆಸ್ಟ್ ಫುಲ್ ಬ್ಯಾಕ್ ಪ್ರಶಸ್ತಿಯನ್ನು ಎಂ.ಬಾಡಗ ತಂಡದ ಬಾರಿಯಂಡ ಬೆಳ್ಯಪ್ಪ, ಬೆಸ್ಟ್ ಹಾಫ್ ಪ್ರಶಸ್ತಿ ಕುಂದ ತಂಡದ ಮಾಪಣಮಾಡ ಬೋಪಣ್ಣ, ಬೆಸ್ಟ್ ಫಾರ್ವಡ್ ಪ್ರಶಸ್ತಿ ನಾಪೋಕ್ಲು ತಂಡದ ಕುಲ್ಲೇಟೀರ ನಾಚಪ್ಪ, ಅತ್ಯುತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿ ಎಂ.ಬಾಡಗ ತಂಡದ ಪಾಂಡಂಡ ದೇಚಮ್ಮ, ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಕಿರುಂದಾಡು ತಂಡದ ಸಂಕಪ್ಪ, ಶಿಸ್ತಿನ ತಂಡ ಪ್ರಶಸ್ತಿ ಕಾರ್ಮಾಡು ಪಡೆದುಕೊಂಡಿತು.

ಗಮನ ಸೆಳೆದ ಯುವತಿ
ರಾಷ್ಟ್ರೀಯ ಬಾಲಕಿಯರ ಜೂನಿಯರ್ ತಂಡ ಪ್ರತಿನಿಧಿಸಿದ್ದ ಪಾಂಡಂಡ ದೇಚಮ್ಮ ಆತಿಥೇಯ ಬಾಡಗ (ಎ) ತಂಡದಲ್ಲಿ ಆಡಿ ಗಮನ ಸೆಳೆದಳು. ಪುರುಷ ಆಟಗಾರರಿಗೆ ಸೆಡ್ಡು ನೀಡಿದ ಈಕೆ ಪಂದ್ಯಾಟದಲ್ಲಿ ಆಕರ್ಷಣೆಯಾದಳು. ತಾ. ೨೬ ರಂದು ನಡೆದ ಸೆಮಿಫೈನಲ್ ಪಂದ್ಯಾಟದಲ್ಲಿ ಈಕೆ ೨ ಗೋಲು ಬಾರಿಸಿ ತಂಡ ಫೈನಲ್ ಪ್ರವೇಶಿಸಲು ಕಾರಣಳಾಗಿದ್ದಳು.
ತೀರ್ಪುಗಾರರಾಗಿ ಚಂದಪಂಡ ಆಕಾಶ್, ಅಂಜಪರವಂಡ ಕುಶಾಲಪ್ಪ, ತಾಂತ್ರಿಕ ನಿರ್ದೇಶಕ ಪಳಂಗಡ ಲವಕುಮಾರ್, ತಾಂತ್ರಿಕ ವಿಭಾಗ ದಲ್ಲಿ ಸುಳ್ಳಿಮಾಡ ಸುಬ್ಬಯ್ಯ, ಕುಪ್ಪಂಡ ದಿಲನ್, ಅಪ್ಪಚೆಟ್ಟೋಳಂಡ ಅಯ್ಯಪ್ಪ, ಕರವಂಡ ಅಪ್ಪಣ್ಣ, ವೀಕ್ಷಕ ವಿವರಣೆಗಾರರಾಗಿ ಮಾಳೇಟಿರ ಶ್ರೀನಿವಾಸ್ ಕಾರ್ಯನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net