ಕೂಲಿಕಾರರ ಸಮಸ್ಯೆಗೆ ‘ಮುರಿಯಾಳು’ ನೆರವು, ಹಲವು ಗ್ರಾಮಗಳ ಗದ್ದೆಗಳಲ್ಲಿ ಮಹಿಳೆಯರದೆ ಕಾರುಬಾರು

22sdp2- murilau
Published on

ಸಿದ್ದಾಪುರ: ತಾಲೂಕಿನಲ್ಲಿ ಕೃಷಿ ಚಟುವಟಿಕೆ ಭರದಿಂದ ಸಾಗುತ್ತಿದ್ದು, ಭತ್ತದ ಗದ್ದೆ ಹದ ಮಾಡುವುದರಿಂದ ಹಿಡಿದು ಭತ್ತದ ಸಸಿ ನಾಟಿ ಮಾಡುವವರೆಗೂ ಕೂಲಿಯಾಳುಗಳ ಸಮಸ್ಯೆ. ಇದಕ್ಕೆ ಪರಿಹಾರ ಎನ್ನುವಂತೆ ಮುರಿಯಾಳು ಹಾಗೂ ನಾಟಿ ಯಂತ್ರದ ಮೂಲಕ ಭತ್ತದ ಸಸಿ ನಾಟಿ ಕಾರ್ಯ ಸಾಗುತ್ತಿದೆ.
ಎಲ್ಲಿ ನೋಡಿದರೂ ಭತ್ತದ ಗದ್ದೆಯಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿರುವುದು ಕಂಡುಬರುತ್ತಿದೆ. ಮಳೆ ಈ ವರ್ಷ ಉತ್ತಮವಾಗುತ್ತಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಭತ್ತದ ಗದ್ದೆಯನ್ನು ಹದ ಮಾಡಲು ಎತ್ತುಗಳು ಬಳಕೆ ಒಂದೆಡೆಯಾದರೆ, ಇನ್ನು ಕೆಲವೆಡೆ ಯಂತ್ರದ ಬಳಕೆಯಾಗುತ್ತಿದೆ. ಅದರಂತೆ ಭತ್ತದ ಸಸಿ ನಾಟಿ ಮಾಡುವುದಕ್ಕೆ ಕೂಲಿ ಸಮಸ್ಯೆ ಇರುವುದರಿಂದ ಮುರಿಯಾಳು ಹಾಗೂ ಯಂತ್ರದ ಮೂಲಕ ನಾಟಿ ಕಾರ್ಯ ನಡೆಯುತ್ತಿದೆ.
ಗದ್ದೆ ಹದಮಾಡುವುದಕ್ಕೆ ಹಾಗೂ ನಾಟಿ ಮಾಡುವುದಕ್ಕೆ ಗ್ರಾಮೀಣ ಪ್ರದೇಶದ ಕೃಷಿಕರು ಮುರಿಯಾಳುವಿನಲ್ಲಿ ಕೃಷಿ ಮಾಡುತ್ತಿದ್ದಾರೆ. ಮುರಿಯಾಳುವಿನಿಂದ ಕೂಲಿಕಾರರ ಸಮಸ್ಯೆ ಕಡಿಮೆಯಾಗುತ್ತದೆ. ಒಂದು ಮನೆಯ ಕೃಷಿ ಕೆಲಸಕ್ಕೆ ಮತ್ತೊಂದು ಮನೆಯವರು ಹೋಗುವುದು. ಇದು ಇಡೀ ಊರಿನ ಪ್ರತಿಯೊಂದು ಮನೆಯಲ್ಲಿ ನಡೆಯುವುದರಿಂದ ಕೂಲಿ ಕೆಲಸಕ್ಕೆ ತೊಂದರೆಯಾಗುತ್ತಿಲ್ಲ ಎನ್ನುವುದು ಕೃಷಿಕರ ಮಾತು.
ಎಲ್ಲೆಲ್ಲಿ ಮುರಿಯಾಳಿನಲ್ಲಿ ಕೃಷಿ: ಮನಮನೆ, ಕವಂಚೂರು, ಶಿರಳಗಿ, ಹಲಗೇರಿ, ಅಕ್ಕುಂಜಿ, ಕೋಲಸಿರ್ಸಿ, ಬೇಡ್ಕಣಿ, ನೆಜ್ಜೂರು ವ್ಯಾಪ್ತಿಯಲ್ಲಿ ಮುರಿಯಾಳುವಿನ ಮೂಲಕ ಕೃಷಿ ಕೆಲಸ ಹೆಚ್ಚಾಗಿ ನಡೆಯುತ್ತಿದೆ.
ಕೂಲಿಕಾರರ ಕೊರತೆಗೆ ಪರ್ಯಾಯ
ಭತ್ತದ ಸಸಿ ನಾಟಿ ಕಾರ್ಯದಲ್ಲಿ ಮಹಿಳೆಯರೇ ಹೆಚ್ಚಾಗಿ ತೊಡಗಿಕೊಳ್ಳುತ್ತಿದ್ದಾರೆ. ಕೃಷಿಕ ಮಹಿಳೆಯರ ಕೊರತೆಯೂ ಇರುವುದರಿಂದ ಭತ್ತದ ಸಸಿ ನಾಟಿ ಕಾರ್ಯಕ್ಕೆ ಹಿನ್ನಡೆ ಆಗುತ್ತಿದೆ. ಮುರಿಯಾಳಿನಲ್ಲಿ ನಾಟಿ ಕಾರ್ಯವನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದೇವೆ. ಅದರಂತೆ ನಾವು ಮುರಿಯಾಳುಗಳ ಮೂಲಕ ನಾಟಿ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ ಎಂದು ಕೋಲಸಿರ್ಸಿ ಊರಿನ ಕೃಷಿಕ ಮಹಿಳೆಯರ ಅಂಬೋಣವಾಗಿದೆ.

ಈ ವರ್ಷ ಮಳೆಗಾಲ ಒಮ್ಮೆಲೆ ಪ್ರಾರಂಭವಾಗಿದ್ದರಿಂದ ಕೃಷಿ ಚಟುವಟಿಕೆಗೆ ಹಿನ್ನಡೆ ಆಗಿತ್ತು. ಆದರೆ, ಈಗ ಮಳೆ ಕಡಿಮೆ ಆಗಿರುವುದರಿಂದ ಕೃಷಿ ಕಾರ್ಯ ಜೋರಾಗಿ ನಡೆಯುತ್ತಿದೆ. ಈಗಾಗಲೇ 3500ಕ್ಕೂ ಹೆಚ್ಚು ಹೆಕ್ಟೇರ್​ನಲ್ಲಿ ಭತ್ತದ ನಾಟಿ ಕಾರ್ಯ ಮುಕ್ತಾಯವಾಗಿದೆ.| ಪ್ರಶಾಂತ ಜಿ.ಎಸ್., ಕೃಷಿ ಅಧಿಕಾರಿ ಸಿದ್ದಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net