

ಹುಬ್ಬಳ್ಳಿ: ನಗರದ ಶ್ರೀ ಸಿದ್ಧಾರೂಢ ಮಠದ ಹತ್ತಿರ ಅಪಹರಿಸಿ ಕೊಲೆ ಮಾಡುವ ಹೊಂಚು ಹಾಕಿದ್ದ ತಂಡವೊಂದರ ಸಂಚು ಬಯಲೆಗೆಳದಿರುವ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಮಂಜುನಾಥ ಪರಶುರಾಮ ಪಾಂಚಾನ (21), ಪವನ ಗೌಸಪ್ಪ ಗಬ್ಬೂರ (22), ವಿನಾಯಕ ಪರಶುರಾಮ ದುಂಡಿ (20), ನಾಗರಾಜ ಕಾಶಿನಾಥ ಮಿರಜಕರ (59), ರಾಜಪ್ಪ ರಾಮಪ್ಪ ಹನಮನಹಳ್ಳಿ (28), ಓರ್ವ ಬಾಲಕ ಹಾಗೂ ಗಣೇಶ ನಾಗರಾಜ ಬಿಲಾನಾ (ತಲೆಮರೆಸಿಕೊಂಡ ಆರೋಪಿ) ಎಂದು ಗುರುತಿಸಲಾಗಿದೆ.
ಜೂನ್ 19ರಂದು ರಾತ್ರಿ 10 ಗಂಟೆ ವೇಳೆಗೆ ಕೊಲೆ ಉದ್ದೇಶದಿಂದ ಶಸ್ತ್ರಾಸ್ತ್ರಗಳನ್ನು ವಾಹನಗಳಲ್ಲಿ ಇಟ್ಟುಕೊಂಡು ಹೊರಟಿದ್ದ ಗ್ಯಾಂಗ್ ಬಗ್ಗೆ ಮಾಹಿತಿ ಪಡೆದ ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ದಕ್ಷಿಣ ಉಪ ವಿಭಾಗದ ಎಸಿಪಿ ಉಮೇಶ ಚಿಕ್ಕಮಠ ಮತ್ತು ಹಳೇಹುಬ್ಬಳ್ಳಿ ಇನ್ಸಪೆಕ್ಟರ್ ಎಸ್.ಎಚ್. ಯಳ್ಳೂರ ಅವರ ನೇತತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ತಕ್ಷಣ ಕಾರ್ಯಪ್ರವೃತ್ತವಾದ ತಂಡವು ಆರೋಪಿಗಳ ಮಾಹಿತಿ ಕಲೆಹಾಕಿ ಪ್ರಕರಣ ದಾಖಲಾದ 24 ಗಂಟೆಯೊಳಗೆ ಕಾನೂನು ಸಂರ್ಷಕ್ಕೆ ಒಳಗಾದ ಬಾಲಕ ಸೇರಿ 6 ಜನರನ್ನು ಬಂಧಿಸಿದ್ದಾರೆ.
ಎರಡು ತಲವಾರ್, ಎರಡು ಚಾಕು ಹಾಗೂ ಒಂದು ಆಟೋ, ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಆರೋಪಿಗಳನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪರಾರಿಯಾಗಿರುವ ಮತ್ತೋರ್ವ ಆರೋಪಿಗಾಗಿ ಬಲೆ ಬೀಸಲಾಗಿದೆ. ಸಂಭವನೀಯ ಕೊಲೆ ತಡೆಗಟ್ಟುವಲ್ಲಿ ಯಶಸ್ವಿಯಾದ ಪೊಲೀಸ್ ತಂಡದ ಕಾರ್ಯವನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿರುದ್ದಾರೆ.