ಪತ್ನಿ, ಆಕೆಯ ಪ್ರಿಯಕರನ ಕೊಂದವರಿಗೆ ಜೀವಾವಧಿ ಶಿಕ್ಷೆ

dist Court
ಶಿವಮೊಗ್ಗದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ.
Published on

ಶಿವಮೊಗ್ಗ: ತಾಲೂಕಿನ ವಡ್ಡಿನಕೊಪ್ಪದಲ್ಲಿ ಪತ್ನಿ ಮತ್ತು ಆಕೆಯ ಪ್ರೇಮಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ ಪತಿ ಸೇರಿ ಮೂವರಿಗೆ ಶಿವಮೊಗ್ಗದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಕಾರಾಗೃಹ ಶಿಕ್ಷೆ ಮತ್ತು ತಲಾ 1 ಲಕ್ಷ ರೂ. ದಂಡ ವಿಧಿಸಿದೆ.

ಶಿವಮೊಗ್ಗ ವೆಂಕಟೇಶ್ವರನಗರದ 5ನೇ ಕ್ರಾಸ್‌ನ ಕೃಷ್ಣಮೂರ್ತಿ ಅವರ ಮಗ ಕೆ.ಕಾರ್ತಿಕ್ (28) ಮತ್ತು ಆತನ ಸ್ನೇಹಿತರಾದ ವಿ.ಭರತ್ (23) ಮತ್ತು ಸಂದೀಪ್ (21) ಜೀವಾವಧಿ ಶಿಕ್ಷೆಗೆ ಒಳಗಾದವರು. ಇವರು ಕಾರ್ತಿಕ್ ಪತ್ನಿ ಶ್ರೀರಾಮನಗರದ ರೇವತಿ ಮತ್ತು ವಿಜಯ್ ಎಂಬುವರನ್ನು ಕೊಲೆ ಮಾಡಿದ್ದರು.
2017ರ ಸೆ.4ರಂದು ಕಾರ್ತಿಕ್ ಮತ್ತು ರೇವತಿ ಅವರ ವಿವಾಹವಾಗಿತ್ತು. ಆನಂತರ ಜಗಳವಾಡಿಕೊಂಡು ಪತಿ ಕಾರ್ತಿಕ್ ಅನ್ನು ತೊರೆದಿದ್ದ ರೇವತಿ ಅವರು ಶ್ರೀರಾಮಪುರದಲ್ಲಿ ತಮ್ಮ ಮನೆ ಎದುರಿದ್ದ ವಿಜಯ್‌ನನ್ನು ಪ್ರೀತಿಸುತ್ತಿದ್ದರು. ಇದೇ ವಿಚಾರಕ್ಕೆ ಆಕೆ ಮನೆ ಬಿಟ್ಟು ಹೋಗಿದ್ದರು ಎನ್ನಲಾಗಿದೆ. ಇದರಿಂದ ಸಿಟ್ಟಾಗ ಕಾರ್ತಿಕ್, ತನ್ನ ಸ್ನೇಹಿತರೊಂದಿಗೆ ಸೇರಿ ಇಬ್ಬರನ್ನೂ ಕೊಲೆ ಮಾಡುವ ಪ್ಲಾೃನ್ ಹಾಕಿದ್ದ.
ಅದರಂತೆ ರೇವತಿ ಮತ್ತು ವಿಜಯ್‌ನನ್ನು ವಡ್ಡಿನಕೊಪ್ಪಕ್ಕೆ ಕರೆಸಿಕೊಂಡಿದ್ದ ಕಾರ್ತಿಕ್ ಸ್ಮೇಹಿತರ ಜತೆಗೂಡಿ ಮಚ್ಚು, ಲಾಂಗು, ಕಲ್ಲಿನಿಂದ ಹಲ್ಲೆ ನಡೆಸಿ ಇಬ್ಬರನ್ನೂ ಕೊಲೆ ಮಾಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ತುಂಗಾನಗರದ ಆಗಿನ ಸಿಪಿಐ ಮಹಾಂತೇಶ್ ಬಿ ಹೊಳಿ ಅವರು ಕಾರ್ತಿಕ್, ಭರತ್, ಸತೀಶ್ ಮತ್ತು ಸಂದೀಪ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚರಣೆ ನಡೆಸಿದ ನ್ಯಾಯಾಧೀಶ ಕೆ.ಎಸ್.ಮಾನು ಅವರು, ಕಾರ್ತಿಕ್, ವಿ.ಭರತ್ ಮತ್ತು ಸಂದೀಪ್ ಮೇಲಿನ ಆರೋಪ ಸಾಬೀತಾಗಿದ್ದರಿಂದ ಮೂವರಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ. ಪ್ರಕರಣದ ಮೂರನೇ ಆರೋಪಿ ಸತೀಶ್ ತಲೆಮರೆಸಿಕೊಂಡಿದ್ದು ಆತನ ಮೇಲೂ ಪ್ರತ್ಯೇಕ ದೋಷಾರೋಪಣ ಪಟ್ಟಿ ಸಲ್ಲಿಸಿ ವಿಚಾರಣೆ ಬಾಕಿ ಇರಿಸಲಾಗಿದೆ. ಸರ್ಕಾರಿ ಅಭಿಯೋಜಕ ಜೆ.ಶಾಂತರಾಜ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net