

ಪುತ್ತೂರು: ನೆಹರು ನಗರದಲ್ಲಿ ಪಾದಚಾರಿಗೆ ದ್ವಿಚಕ್ರ ವಾಹನ ಗುದ್ದಿ ಚಿಕಿತ್ಸೆಯ ವೆಚ್ಚ ಭರಿಸುವ ವಿಚಾರದಲ್ಲಿ ಆರಂಭವಾದ ಗಲಾಟೆ ಕೊಲೆಯ ಮೂಲಕ ಅಂತ್ಯವಾಗಿದೆ. ಕೊಲೆಗೈದ ನಾಲ್ಕು ಮಂದಿ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ.
ಪೋಳ್ಯ ಕಲ್ಲೇಗ ನಿವಾಸಿ ಅಕ್ಷಯ್ ಕಲ್ಲೇಗ (26) ಮೃತ ಪ್ರಕರಣದಲ್ಲಿ ಬನ್ನೂರು ಜೈನಗುರಿ ನಿವಾಸಿಗಳಾದ ಚೇತು ಅಲಿಯಾಸ್ ಚೇತನ್, ಮಂಜು ಅಲಿಯಾಸ್ ಮಂಜುನಾಥ, ಪಡೀಲು ನಿವಾಸಿಗಳಾದ ನಿವಾಸಿ ಮನೀಶ್ ಮಣಿಯಾಣಿ, ಕೇಶವ ಠಾಣೆಗೆ ಶರಣಾಗಿದ್ದಾರೆ.
ಸಾಯಂಕಾಲ ನೆಹರು ನಗರದ ಪೆಟ್ರೋಲ್ ಪಂಪ್ ಬಳಿಯಲ್ಲಿ ಪಾದಚಾರಿಗೆ ಬೈಕ್ ಗುದ್ದಿದೆ. ಬೈಕ್ ಸವಾರ ಚೇತನ್ ನಿಕಟವರ್ತಿಯಾಗಿದ್ದು, ಗಾಯಗೊಂಡ ಪಾದಚಾರಿಯ ಚಿಕಿತ್ಸೆಗೆ 1800ರೂ. ಆಗಿದ್ದು, 2ಸಾವಿರ ನೀಡುವಂತೆ ಅಕ್ಷಯ್ ಬೈಕ್ ಸವಾರನಿಗೆ ತಿಳಿಸಿದ್ದಾನೆ. ಈ ಸಂದರ್ಭ ಚೇತನ್ ಪ್ರಕರಣ ದಾಖಲಿಸುವುದಾದರೆ, ಹಣ ನೀಡುವುದೇಕೆ ಎಂದು ಪ್ರಶ್ನಿಸಿದ್ದಾರೆ. ಈ ವಿಚಾರವೇ ವಿಕೋಪಕ್ಕೆ ಹೋಗಿ ತಡ ರಾತ್ರಿ ಕಾರಿನಲ್ಲಿ ತಂಡ ನೆಹರುನಗರಕ್ಕೆ ಆಗಮಿಸಿದೆ.
ಅಕ್ಷಯ್ ಮೇಲೆ ಕಾಲೇಜು ರಸ್ತೆಯಲ್ಲಿನ ಎಟಿಎಂ ಮುಂಭಾಗದಲ್ಲಿ ಮೊದಲು ದಾಳಿ ನಡೆದಿದ್ದು, ಪಕ್ಕದ ಪಾರ್ಕಿಂಗ್ ಜಾಗದ ಕಡೆಗೆ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಬಳಿಕ ಮುಖ್ಯ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್ ಏರಲು ನೋಡಿದ್ದು ಈ ಸಂದರ್ಭವೂ ದಾಳಿ ನಡೆಸಲಾಗಿದೆ. ಈ ಸಂದರ್ಭ ತಪ್ಪಿಸುವ ಯತ್ನದಲ್ಲಿ ಪಕ್ಕದ ಖಾಲಿ ಜಾಗದ ಕಡೆಗೆ ಓಡಿದ್ದು, ಅಲ್ಲೇ ಬಿದ್ದು ಮೃತಪಟ್ಟಿದ್ದಾನೆ. ತಲವಾರು ದಾಳಿಯಿಂದ ಅಕ್ಷಯ್ ಕುತ್ತಿಗೆ, ಕೈ, ಕಾಲಿಗೆ ಬಲವಾದ ಪೆಟ್ಟುಗಳಾಗಿದ್ದು ದೇಹ ಸಂಪೂರ್ಣ ರಕ್ತದಿಂದ ತೊಯ್ದುಹೊಗಿತ್ತು.
ವಿಧಿವಿಜ್ಞಾನ ಇಲಾಖೆಯ ಮೂಲಕ ಮರಣೋತ್ತರ ಪರೀಕ್ಷೆ ನಡೆಸಿ, ದೇಹವನ್ನು ಮನೆಯವರಿಗೆ ಹಸ್ತಾಂತರ ಮಾಡಲಾಗಿದೆ. ಕಬಕದಿಂದ ವಿಶೇಷ ಮೆರವಣಿಗೆಯಲ್ಲಿ ದೇಹವನ್ನು ತರುವ ತಯಾರಿಗಳು ನಡೆದರೂ, ಇಲಾಖೆಯ ಪರವಾನಿಗೆ ಸಿಗದ ಕಾರಣ ಇದನ್ನು ಕೈ ಬಿಡಲಾಗಿದೆ.