

ದೊಡ್ಡಬಳ್ಳಾಪುರ : ನಗರದ ರೈಲ್ವೆ ನಿಲ್ದಾಣದ ವೃತ್ತದಲ್ಲಿ ಆ.18ರಂದು ರಕ್ತದ ಮಡುವಿನಲ್ಲಿ ವ್ಯಕ್ತಿಯ ಶವಪತ್ತೆಯಾಗಿದ್ದ ಪ್ರಕರಣ ತಿರುವು ಪಡೆದುಕೊಂಡಿದೆ.
ಮೇಲ್ನೋಟಕ್ಕೆ ಹಿಟ್ ಆ್ಯಂಡ್ ರನ್ ಕೇಸ್ ಎಂದುಕೊಂಡಿದ್ದ ಪ್ರಕರಣ ಹೊಸ ಆಯಾಮ ಪಡೆದುಕೊಂಡಿದ್ದು, ಹಣ ಮತ್ತು ಮದ್ಯ ಕೊಡಿಸದ್ದಕ್ಕೆ ಸ್ನೇಹಿತನನ್ನು ಕೊಲೆ ಮಾಡಲಾಗಿದೆ ಎಂಬುದು ಇತ್ತೀಚಿಗಿನ ಮಾಹಿತಿ.
ಯಲಹಂಕ ನ್ಯೂಟೌನ್ ನಿವಾಸಿ ಬಾಲಪ್ಪ(35) ಮೃತ. ಸ್ನೇಹಿತ ರಾಮಾಂಜಿನಪ್ಪ (30) ಎಂಬಾತ ಹಣ ಮತ್ತು ಮದ್ಯ ಕೊಡಿಸುವಂತೆ ಬಾಲಪ್ಪಗೆ ಒತ್ತಡ ಹಾಕಿದ್ದು, ಕೊಡಿಸದ ಕಾರಣ ಕೊಲೆ ಮಾಡಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ: ಆ.19ರಂದು ಮುಂಜಾನೆ ಗಸ್ತಿನಲ್ಲಿದ್ದ ದೊಡ್ಡಬಳ್ಳಾಪುರ ನಗರ ಪೊಲೀಸರಿಗೆ ರೈಲ್ವೆ ನಿಲ್ದಾಣದ ಸರ್ಕಲ್ ಬಳಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯ ಶವ ಪತ್ತೆಯಾಗಿತ್ತು. ಪರಿಶೀಲನೆ ನಡೆಸಿದಾಗ ಮೃತ ವ್ಯಕ್ತಿ ಯಲಹಂಕ ನ್ಯೂಟೌನ್ ನಿವಾಸಿ ಬಾಲಪ್ಪ(35) ತಿಳಿದು ಬಂದಿದೆ. ಅಪರಿಚಿತ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದಾನೆಂದು ಶಂಕಿಸಲಾಗಿತ್ತು. ಆದರೆ, ಮೃತನ ತಲೆ ಹಿಂಭಾಗ ಸೇರಿ ಎಡಭಾಗದ ಪಕ್ಕೆಯಲ್ಲಿ ಗಾಯದ ಗುರುತು ಪತ್ತೆಯಾದ ಆಧಾರದ ಮೇಲೆ ಪೊಲೀಸರು ಸ್ಥಳಿಯ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಕೊಲೆ ಎಂಬ ಗುಮಾನಿ ಶುರುವಾಗಿದೆ. ಇದರ ಮಧ್ಯೆ ಬಾಲಪ್ಪನ ಪತ್ನಿ ಸುನೀತಾ ಕೊಲೆ ಪ್ರಕರಣ ದಾಖಲು ಮಾಡಿದ್ದಾರೆ.
ಹಣ ಕೊಡಲ್ಲ, ಮನೆಗೆ ಬನ್ನಿ ಎಂದಿದ್ದೆ : ಪತಿ ಬಾಲಪ್ಪ ಅವರ ಸ್ವಂತ ಊರಾದ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಚೋಳಂಸಮುದ್ರಕ್ಕೆ ಆ.17ರ ಮಧ್ಯಾಹ್ನ ಹೋಗಿದ್ದರು. ಮರುದಿನವೇ ಯಲಹಂಕಕ್ಕೆ ಬರುವುದಾಗಿ ಹೇಳಿದ್ದರು. 18ರ ರಾತ್ರಿ 7.24ಕ್ಕೆ ಪೋನ್ ಮಾಡಿ ದೊಡ್ಡಬಳ್ಳಾಪುರ ಟೌನ್ನಲ್ಲಿ ಇದ್ದೇನೆ, ಸ್ನೇಹಿತರು ಎಣ್ಣೆ ಕೊಡಿಸುವಂತೆ ಕಾಡಿಸುತ್ತಿದ್ದಾರೆ, 200 ರೂ. ಪೋನ್ ಪೇ ಮಾಡುವಂತೆ ಕೇಳಿದರು. ಹಣ ಕೊಡುವುದಿಲ್ಲ ಮನೆಗೆ ಬನ್ನಿ ಎಂದು ಹೇಳಿದೆ. ರಾತ್ರಿ ಅವರು ಮನೆಗೆ ಬಂದಿರಲಿಲ್ಲ. ಬೆಳಗ್ಗೆ 8ಕ್ಕೆ ಪೊಲೀಸರು ಪೋನ್ ಮಾಡಿ ಮೃತಪಟ್ಟಿರುವ ವಿಷಯ ತಿಳಿಸಿದರು ಎಂದು ಮೃತ ಬಾಲಪ್ಪನ ಪತ್ನಿ ಸುನೀತಾ ಸುದ್ದಿಗಾರರಿಗೆ ತಿಳಿಸಿದರು.
ಗಾರೆ ಕೆಲಸ ಮಾಡುವ ಪತಿ ಹೆಚ್ಚಾಗಿ ದೊಡ್ಡಬಳ್ಳಾಪುರ, ರಾಜಾನುಕುಂಟೆಯಲ್ಲಿ ಕೆಲಸ ಮಾಡುತ್ತಿದ್ದರು, ಈ ಭಾಗದಲ್ಲಿ ಅವರಿಗೆ ಸ್ನೇಹಿತರಿದ್ದಾರೆ. ಚೋಳಸಮುದ್ರಂನಿಂದ ರೈಲಿನಲ್ಲಿ ಬರುವಾಗ ಅವರ ಸ್ನೇಹಿತರು ರೈಲಿನಲ್ಲಿ ಜತೆಯಾಗಿ ಬಂದಿದ್ದಾರೆ. ಯಲಹಂಕದಲ್ಲಿ ಇಳಿಯ ಬೇಕಿದ್ದ ಅವರನ್ನು ದೊಡ್ಡಬಳ್ಳಾಪುರದಲ್ಲಿ ಇಳಿಸಿ ಜತೆಯಲ್ಲಿ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದರು.