

ಸುಳ್ಯ: ಕೊಡಗು ಜಿಲ್ಲೆಯ ಸಂಪಾಜೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಕೊಲೆ ಪ್ರಕರಣದ ಆರೋಪಿ, ಕಲ್ಲುಗುಂಡಿ ಸಮೀಪದ ದೊಡ್ಡಡ್ಕ ನಿವಾಸಿ ಸಂಪತ್‌ಕುಮಾರ್(36) ಎಂಬಾತನನ್ನು ನಾಲ್ವರು ದುಷ್ಕರ್ಮಿಗಳ ತಂಡ ಸುಳ್ಯ ಕಸಬಾ ಗ್ರಾಮದ ಶಾಂತಿನಗರದಲ್ಲಿ ಗುರುವಾರ ಅಟ್ಟಾಡಿಸಿ ತಲವಾರು, ಚೂರಿ, ಕೋವಿಯಿಂದ ದಾಳಿ ನಡೆಸಿ ಬರ್ಬರವಾಗಿ ಹತ್ಯೆಗೈದಿದೆ.
ಬಾಲಚಂದ್ರ ಕಳಗಿ ಅವರನ್ನು ಅಪಘಾತ ನಡೆಸಿ ಕೊಲೆ ಮಾಡಿದ ಪ್ರಕರಣದ ಆರೋಪಿಗಳಲ್ಲಿ ಓರ್ವನಾಗಿದ್ದ ಸಂಪತ್ ಜಾಮೀನು ಪಡೆದು ಕೆಲತಿಂಗಳ ಹಿಂದೆ ಬಿಡುಗಡೆಯಾಗಿದ್ದು, ಬಳಿಕ ಕಲ್ಲು ಮತ್ತು ಮರಳು ವ್ಯವಹಾರದಲ್ಲಿ ತೊಡಗಿಕೊಂಡಿದ್ದ. ಕೆಲವೊಮ್ಮೆ ಸುಳ್ಯದ ಶಾಂತಿನಗರದಲ್ಲಿ ಬಾಡಿಗೆ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದ.
ರಾತ್ರಿ ಶಾಂತಿನಗರದಲ್ಲಿ ಉಳಿದುಕೊಂಡಿದ್ದ ಆತ ಗುರುವಾರ ಬೆಳಗ್ಗೆ 7.15ರ ವೇಳೆಗೆ ಕಾರಲ್ಲಿ ಹೋಗುತ್ತಿದ್ದಾಗ ಮುಸುಕುಧಾರಿಗಳ ತಂಡ ಅಡ್ಡಗಟ್ಟಿ ದಾಳಿ ನಡೆಸಿದೆ. ಈ ವೇಳೆ ಸಂಪತ್ ಕಾರಿನಿಂದ ಇಳಿದು ತಪ್ಪಿಸುವ ಪ್ರಯತ್ನದಲ್ಲಿ ತನ್ನ ಮನೆ ಕಡೆಗೆ ಓಡಿ ಪಕ್ಕದ ಮನೆಯೊಂದಕ್ಕೆ ಹೊಕ್ಕು ಬಾಗಿಲು ಹಾಕಿಕೊಂಡಿದ್ದ. ಅಲ್ಲಿಗೆ ಬೆನ್ನಟ್ಟಿ ಬಂದ ತಂಡ ಮನೆಯೊಳಗೆ ಪ್ರವೇಶಿಸಿ ಗುಂಡು ಹಾರಿಸಿ, ತಲವಾರು, ಚೂರಿಯಿಂದ ದಾಳಿ ನಡೆಸಿದೆ. ಗಂಭೀರ ಗಾಯಗೊಂಡ ಸಂಪತ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ತಡೆಯಲು ಬಂದಾತನಿಗೆ ಗಾಯ: ಮುಸುಕುಧಾರಿಗಳನ್ನು ತಡೆಯಲು ಯತ್ನಿಸಿದ ಸಮೀಪದ ಮನೆಯ ತಿಮ್ಮಪ್ಪ ಎಂಬುವರಿಗೂ ತಲವಾರಿನಿಂದ ಕಡಿದಿದ್ದು, ಕೈಗೆ ಗಾಯಗಳಾಗಿವೆ. ಶಬ್ಧ ಕೇಳಿ ಸ್ಥಳೀಯರು ಘಟನಾ ಸ್ಥಳಕ್ಕೆ ಬರುವುದನ್ನು ಕಂಡ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸ್ಥಳದಿಂದ ಒಂದು ಕೋವಿ ವಶಪಡಿಸಿಕೊಳ್ಳಲಾಗಿದೆ. ಪೂರ್ವದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವುದಾಗಿ ಶಂಕಿಸಲಾಗಿದೆ.
ಸುಳ್ಯ ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ಬಂದು ಪ್ರಕರಣ ದಾಖಲಿಸಿ ಮಹಜರು ನಡೆಸಿದ್ದಾರೆ. ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಪರಿಶೀಲನೆ ನಡೆಸಿ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ. ಘಟನೆ ತಿಳಿದು ನೂರಾರು ಮಂದಿ ಕುತೂಹಲಿಗರು ಘಟನಾ ಸ್ಥಳದಲ್ಲಿ ಜಮಾಯಿಸಿದ್ದರು. ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಗರ್ಭಿಣಿಯ ಎದುರೇ ಕೃತ್ಯ
ಮುಸುಕುಧಾರಿಗಳ ತಂಡ ಕಾರನ್ನು ಅಡ್ಡಗಟ್ಟಿ ದಾಳಿ ನಡೆಸಿದಾಗ ಸಂಪತ್ ಕಾರಿನಿಂದ ಇಳಿದು ಓಡಿ ಪಕ್ಕದ ಮನೆಯೊಂದಕ್ಕೆ ಹೊಕ್ಕು ಬಾಗಿಲು ಹಾಕಿದ್ದ. ಆ ಮನೆಯಲ್ಲಿದ್ದ ಗರ್ಭಿಣಿ ಮತ್ತು ಚಿಕ್ಕ ಮಗುವಿದ್ದು, ಅವರ ಎದುರಿನಲ್ಲೇ ಕೊಲೆ ನಡೆದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹ ಮತ್ತು ಮನೆಯ ದೃಶ್ಯ ಭೀಭತ್ಸವಾಗಿತ್ತು.
ವಿಶೇಷ ತಂಡ ರಚನೆ: ದುಷ್ಕರ್ಮಿಗಳ ಪತ್ತೆಗೆ ಸುಳ್ಯ ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಸುಳ್ಯ ಮತ್ತು ಬೆಳ್ಳಾರೆ ಪೊಲೀಸ್ ಠಾಣೆಯ ಉಪನಿರೀಕ್ಷಕರು ಮತ್ತು ಇತರ ಅಧಿಕಾರಿಗಳು ತಂಡದಲ್ಲಿ ಇರಲಿದ್ದಾರೆ. ಕೆಲವು ಶಂಕಿತರನ್ನು ಕೇಂದ್ರೀಕರಿಸಿ ತನಿಖೆ ಮುಂದುವರಿಸಲಾಗಿದೆ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.