ಮೇರ್ಲ ಹತ್ಯೆಗೆ ಪ್ರತೀಕಾರವಾಗಿ ಚರಣ್ ಕೊಲೆ, ಕಿಶೋರ್ ಪೂಜಾರಿ ತಂಡದ ಕೃತ್ಯ ಮೂವರು ಪೊಲೀಸ್ ವಶಕ್ಕೆ?

murder web
Published on

ಈಶ್ವರಮಂಗಲ: ಎರಡೂವರೆ ವರ್ಷದ ಹಿಂದೆ ಸಂಪ್ಯ ಠಾಣೆ ಬಳಿ ಹಿಂದು ಜಾಗರಣಾ ವೇದಿಕೆ ಪುತ್ತೂರು ತಾಲೂಕು ಕಾರ್ಯದರ್ಶಿ ಕಾರ್ತಿಕ್ ಸುವರ್ಣ ಮೇರ್ಲ ಹತ್ಯೆಗೆ ಪ್ರತೀಕಾರವಾಗಿ ಪ್ರಕರಣದ ಆರೋಪಿ ಚರಣ್‌ರಾಜ್ ರೈ(29) ಎಂಬಾತನನ್ನು ಶನಿವಾರ ಪೆರ್ಲಂಪಾಡಿಯಲ್ಲಿ ಕಡಿದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೌಡಿಶೀಟರ್ ಕಲ್ಲಡ್ಕದ ಕಿಶೋರ್‌ಕುಮಾರ್ ಪೂಜಾರಿ ಹಾಗೂ ಆತನ ಸಹಚರರು ಈ ಕೃತ್ಯ ಎಸಗಿದ್ದು, ಹತ್ಯೆ ಸಂದರ್ಭ ಚರಣ್ ಜತೆಗಿದ್ದ ನವೀನ್‌ಕುಮಾರ್ ನೀಡಿದ್ದ ದೂರಿನನ್ವಯ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಕೆಯ್ಯೂರು ಹಾಗೂ ಸವಣೂರು ಪರಣೆಯ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಹತ್ಯೆಗೀಡಾಗಿದ್ದ ಕಾರ್ತಿಕ್ ಮೇರ್ಲಗೆ ಸಂಬಂಧದಲ್ಲಿ ಭಾವನಾಗಿದ್ದ ಬಂಟ್ವಾಳ ತಾಲೂಕಿನ ಕಲ್ಲಡ್ಕ ನಿವಾಸಿ ಕಿಶೋರ್‌ಕುಮಾರ್, ಮೇರ್ಲ ಅಂತ್ಯಕ್ರಿಯೆ ಸಂದರ್ಭ ಕೊಲೆಗೆ ಪ್ರತೀಕಾರ ತೀರಿಸುವ ಪ್ರತಿಜ್ಞೆ ಮಾಡಿದ್ದ ಎನ್ನಲಾಗಿದೆ. ಇದೀಗ ಕಿಶೋರ್‌ಕುಮಾರ್ ಮತ್ತಾತನ ತಂಡ ಚರಣ್‌ನನ್ನು ಹತ್ಯೆಗೈದಿರುವುದು ಕಾರ್ತಿಕ್‌ಮೇರ್ಲ ಹತ್ಯೆಗೆ ಪ್ರತೀಕಾರವಾಗಿ ಎಸಗಿದ ಕೃತ್ಯ ಎಂಬುದು ಸ್ಪಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದರು

ಚರಣ್‌ರಾಜ್ ಹತ್ಯೆ ಆರೋಪ ಎದುರಿಸುತ್ತಿರುವ ಕಿಶೋರ್ ಕುಮಾರ್ ಮತ್ತು ಆತನ ಸಹಚರರು ಮೂರು ತಿಂಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದರು. ಮೇರ್ಲ ಹತ್ಯೆ ಆರೋಪಿ, ಈಗಲೂ ಜೈಲಿನಲ್ಲಿರುವ ಉಳ್ಳಾಲಬೈಲು ನಿವಾಸಿ ಪ್ರೀತೇಶ್ ಶೆಟ್ಟಿ ಪರ ಸಾಕ್ಷೃ ನುಡಿಯುವಂತೆ ಪ್ರಕರಣದ ಸಾಕ್ಷಿದಾರರೊಬ್ಬರ ಜತೆ ಡೀಲ್‌ಗೆ ಮುಂದಾಗಿದ್ದ ಕಾರಣಕ್ಕೆ ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ನಿವಾಸಿ ರಾಧಾಕೃಷ್ಣ ಪೂಜಾರಿ ಎಂಬುವರ ಹತ್ಯೆಗೆ ಪ್ರಯತ್ನಿಸಿದ ಆಪಾದನೆಯಡಿ ಕಿಶೋರ್ ಹಾಗೂ ಸಹಚರರು ಜೈಲು ಸೇರಿದ್ದರು. ಜೈಲಿನಿಂದ ಹೊರಬಂದ ಬಳಿಕ ಚರಣ್‌ರಾಜ್ ಹತ್ಯೆಗೆ ಅವರು ಸಂಚು ರೂಪಿಸಿದ್ದರು ಎನ್ನಲಾಗಿದೆ.

ಸ್ನೇಹಿತನಿಂದ ದೂರು

ಜೂನ್ 8ರಂದು ಆರಂಭಗೊಳ್ಳಬೇಕಿದ್ದ ಮೆಡಿಕಲ್ ಶಾಪ್‌ನಲ್ಲಿ ಪೂರ್ವ ಸಿದ್ಧತೆಗೆಂದು ತಾರಿಗುಡ್ಡೆ ನಿವಾಸಿ ನವೀನ್‌ಕುಮಾರ್ ಜತೆ ಚರಣ್‌ರಾಜ್ ಪೆರ್ಲಂಪಾಡಿಗೆ ತೆರಳಿದ್ದ. ಮೆಡಿಕಲ್ ಶಾಪ್ ಸಮೀಪ ಕಾರಿನ ಬಳಿ ಚರಣ್‌ರಾಜ್ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಬೈಕ್‌ಗಳಲ್ಲಿ ಆಗಮಿಸಿದ ಮೂವರು ತಲವಾರು ಹಾಗೂ ರಾಡ್‌ನಿಂದ ಕುತ್ತಗೆ ಭಾಗಕ್ಕೆ ಮಾರಣಾಂತಿಕ ಹಲ್ಲೆ ನಡೆಸಿ ಬಂದಿದ್ದ ಬೈಕ್‌ನಲ್ಲೇ ಅಮ್ಚಿನಡ್ಕ ಕಡೆಗೆ ತೆರಳಿದ್ದರು. ಮೂವರು ದಾಳಿಕೋರರ ಪೈಕಿ ಒಬ್ಬ ತನಗೆ ಪರಿಚಯವುಳ್ಳ ಕಲ್ಲಡ್ಕದ ಕಿಶೋರ್ ಪೂಜಾರಿ ಎಂದು ಬೆಳ್ಳಾರೆ ಠಾಣೆಗೆ ನೀಡಿದ ದೂರಿನಲ್ಲಿ ನವೀನ್‌ಕುಮಾರ್ ತಿಳಿಸಿದ್ದ.

ಇಂಬ್ಯನ್ ಬುಡ್ಪನಾ

ತಲವಾರು ದಾಳಿ ವೇಳೆ ಬೈಕ್‌ನಲ್ಲಿ ಬಂದಿದ್ದವರು ‘ಆನಿದ ವಿಚಾರ ಗೊತ್ತುಂಡತ್ತಾ, ಬೊಕ್ಕ ಎಂಕುಲು ಇಂಬ್ಯನ್ ಬುಡ್ಪನಾ’ (ಅವತ್ತಿನ ವಿಚಾರ ತಿಳಿದಿದೆಯಲ್ಲ. ಮತ್ತೆ ಇವನನ್ನು ಬಿಡುತ್ತೇವೆಯೇ?) ಎಂದು ತುಳುವಿನಲ್ಲಿ ಹೇಳಿದ್ದಲ್ಲದೆ, ಆತನನ್ನು ರಕ್ಷಿಸಲು ಮುಂದಾದ ನನಗೆ ಕಿಶೋರ್‌ಕುಮಾರ್ ಬೆದರಿಕೆ ಹಾಕಿದ್ದ ಎಂದು ನವೀನ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಎಚ್ಚರಿಕೆಯಿಂದಿದ್ದರು

ಕಾರ್ತಿಕ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ವರ್ಷದ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಚರಣ್‌ರಾಜ್ ಮತ್ತು ಕಿರಣ್‌ಗೆ ಆಗಿನಿಂದಲೇ ಜೀವ ಭಯವಿತ್ತು. ಎಲ್ಲಿಗೇ ಹೋದರೂ ಅವರಿಬ್ಬರೂ ಜತೆಯಲ್ಲೇ ಇರುತ್ತಿದ್ದರು. ಸಾರ್ವಜನಿಕವಾಗಿಯೂ ಅವರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ ಎಂದು ಅವರ ನಿಕಟವರ್ತಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net