ಜಮೀನು ವಿಚಾರಕ್ಕೆ ಕೊಲೆ

Murder over land
Published on


ಹೊಸಕೋಟೆ; ಜಮೀನು ವಿಚಾರಕ್ಕೆ ಪ್ರಾರಂಭವಾದ ಜಗಳದಲ್ಲಿ ಒಬ್ಬನ ಕೊಲೆಯಾಗಿರುವ ಪ್ರಕರಣ ಮಂಗಳವಾರ ಜಡಿಗೆನಹಳ್ಳಿ ಹೋಬಳಿಯ ದಬ್ಬಗುಂಟಹಳ್ಳಿಯಲ್ಲಿ ನಡೆದಿದೆ. ದಬ್ಬಗುಂಟಹಳ್ಳಿ ನಿವಾಸಿ ಗೋವಿಂದಪ್ಪ(53) ಹತ್ಯೆಯಾಗಿದ್ದು, ಅದೇ ಗ್ರಾಮದ ಮಂಜುನಾಥ್​ (42) ಎಂಬುವವನನ್ನು ಕೊಲೆ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಗೋವಿಂದಪ್ಪನಿಗೆ ಮಂಜುನಾಥ್​ ಬಾಮೈದನಾಗಬೇಕಿದ್ದು, 20 ಗುಂಟೆ ಜಮೀನು ವಿಚಾರಕ್ಕೆ ಆಗಾಗ ಜಗಳ ಮಾಡಿಕೊಳ್ಳುತ್ತಿದ್ದರು. ಗ್ರಾಮಸ್ಥರು ಜಗಳವನ್ನು ತಿಳಿಗೊಳಿಸುತ್ತಿದ್ದರು. ಆದರೆ, ಮಂಗಳವಾರ ಬೆಳಗ್ಗೆ ಗೋವಿಂದಪ್ಪ ಜಮೀನಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮಂಜುನಾಥ್​ ಅಡ್ಡಗಟ್ಟಿ ಜಗಳ ತೆಗೆದಿದ್ದು, ದೊಣ್ಣೆಯಿಂದ ಬಲವಾಗಿ ತಲೆಗೆ ಬಾರಿಸಿದ್ದಾನೆ. ಅಧಿಕ ರಕ್ತಸ್ರಾವವಾಗಿದ್ದ ಗೋವಿಂದಪ್ಪನನ್ನು ಸ್ಥಳಿಯರು ಹೊಸಕೋಟೆ ಎಂವಿಜೆ ಆಸ್ಪತ್ರೆಗೆ ರವಾನಿಸಿದರಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಸ್ಥಳಕ್ಕೆ ಡಿವೈಎಸ್​ಪಿ ಅಣ್ಣಾಸಾಹೇಬ್​ ಪಾಟೀಲ್​, ಪಿಐ ಅಶೋಕ್​ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಆರೋಪಿ ಮಂಜುನಾಥ್​ನನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
ಎಸ್​ಪಿ ಭೇಟಿ ಪರಿಶೀಲನೆ: ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಅಪರ ಪೊಲೀಸ್​ ವರಿಷ್ಠಾಧಿಕಾರಿ ನಾಗೇಶ್​ ಕುಮಾರ್​ ಗ್ರಾಮಕ್ಕೆ ಭೇಟಿ ನೀಡಿ, ಕೊಲೆ ನಡೆದ ಸ್ಥಳ ಪರಿಶೀಲನೆ ನಡೆಸಿದರು. ಡಿವೈಎಸ್ಪಿ ಅಣ್ಣ ಸಾಹೇಬ್​ ಪಾಟೀಲ್​ ಅವರಿಂದ ಮಾಹಿತಿ ಪಡೆದರು. ಇದೇ ಸಂದರ್ಭದಲ್ಲಿ ಬೆರಳಚ್ಚು ತರು ಭೇಟಿ ನೀಡಿ ಅಗತ್ಯ ಮಾಹಿತಿ ಸಂಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net