

ಶಿರಸಿ: ಕ್ಷುಲ್ಲಕ ಕಾರಣಕ್ಕಾಗಿ ಅಳಿಯನೊಬ್ಬ ಅತ್ತೆಯನ್ನು ಹತ್ಯೆಗೈದ ಘಟನೆ ತಾಲೂಕಿನ ದೊಡ್ನಳ್ಳಿ ಬಳಿ ಒಕ್ಕಲಕೊಪ್ಪದಲ್ಲಿ ಗುರುವಾರ ರಾತ್ರಿ ನಡೆದಿದೆ.
ಕಮಲಾ ನಾರಾಯಣ ನಾಯ್ಕ (70) ಮೃತ ಮಹಿಳೆ. ಮೃತಳ ಮಗಳ ಗಂಡ ಬಸವರಾಜ ಪುಟ್ಟಪ್ಪ ನಾಯ್ಕ ಕೊಲೆ ಮಾಡಿದ ಆರೋಪಿ. ಗುರುವಾರ ಸಂಜೆ ಮನೆಯಲ್ಲಿ ಯಾವುದೋ ಕಾರಣಕ್ಕೆ ಜಗಳ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು ಕೋಪಗೊಂಡ ಅಳಿಯ ಚೂಪಾದ ವಸ್ತುವಿನಿಂದ ಅತ್ತೆಯ ಕುತ್ತಿಗೆ ಭಾಗಕ್ಕೆ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ. ಘಟನೆಯ ಕುರಿತು ಆರೋಪಿಯ ಪತ್ನಿ ಗೀತಾ ನಾಯ್ಕ ಪೊಲೀಸ್ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.