

ಬೆಂಗಳೂರು: ಬ್ಯಾಂಕ್ ನೌಕರರನ್ನು ಅಪಹರಿಸಿ ಹಗ್ಗದಿಂದ ಕತ್ತು ಬಿಗಿದು ಹತ್ಯೆ ಮಾಡಿ ವೃಷಭಾವತಿ ನಾಲೆಗೆ ಶವವನ್ನು ಎಸೆದಿದ್ದ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ನಗರದ ಸೆಷನ್ಸ್ ಕೋರ್ಟ್ ತೀರ್ಪು ನೀಡಿದೆ.
2010ರ ಡಿ.4ರಂದು ಲಗ್ಗೆರೆಯಲ್ಲಿ ಖಾಸಗಿ ಬ್ಯಾಂಕ್ ನೌಕರ ವಿನಯ್ಕುಮಾರ್ ಎಂಬಾತನನ್ನು ಕೊಲೆ ಮಾಡಿದ ಆರೋಪ ಪ್ರಕರಣದಲ್ಲಿ 56ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶರಾದ ಕೆ. ನಾರಾಯಣ ಪ್ರಸಾದ್ ತೀರ್ಪು ನೀಡಿದ್ದಾರೆ. ಲಗ್ಗೆರೆಯ ಸುಬ್ಬಣ್ಣ, ಮಧುಸೂದನ್, ಎಸ್. ಅಂಬಿಕಾ ಮತ್ತು ಬಾಬು ರೆಡ್ಡಿ ಶಿಕ್ಷೆಗೆ ಗುರಿಯಾದವರು.
ಖಾಸಗಿ ಬ್ಯಾಂಕ್ ನೌಕರ ವಿನಯ್ಕುಮಾರ್, ಕಾಲೇಜು ದಿನಗಳಲ್ಲಿ ನವ್ಯಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಆಕೆ ಕೂಡ ವಿನಯ್ನನ್ನು ಪ್ರೀತಿಸುತ್ತಿದ್ದಳು. ಇವರಿಬ್ಬರ ಮದುವೆಗೆ ಎರಡೂ ಕುಟುಂಬ ಸದಸ್ಯರು ಒಪ್ಪಿರಲಿಲ್ಲ. ನವ್ಯಾ, ಕುಟುಂಬವನ್ನು ಮದುವೆಗೆ ಒಪ್ಪಿಸುವಂತೆ ವಿನಯ್ಗೆ ಒತ್ತಾಯಿಸುತ್ತಿದ್ದರು. ಇದೇ ವಿಚಾರಕ್ಕೆ ಎರಡು ಕುಟುಂಬ ಸದಸ್ಯರ ನಡುವೆ ಜಗಳವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಒಮ್ಮೆ ವಿನಯ್ ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ್ದ.
ಇದಾದ ಮೇಲೆ 2010ರ ಡಿ.3ರಂದು ನವ್ಯಾಗೆ ಬೇರೊಬ್ಬ ಯುವಕನ ಜೊತೆ ಮದುವೆ ಮಾಡಿದ್ದರು. ವಿಷಯ ತಿಳಿದ ವಿನಯ್, ಡಿ. 4ರ ಸಂಜೆ 4.30ರಲ್ಲಿ ಲಗ್ಗೆರೆಯ ಪ್ರೇಯಸಿ ಮನೆ ಬಳಿ ಬೈಕ್ನಲ್ಲಿ ಓಡಾಡುತ್ತಿದ್ದ. ಕುಪಿತಗೊಂಡ ನವ್ಯಾ ಕುಟುಂಬ ಸದಸ್ಯರು ವಿನಯ್ಗೆ ಥಳಿಸಿ, ಕಾರಿನಲ್ಲಿ ಅಪಹರಿಸಿ ಕೊಲೆ ಮಾಡಿ, ಮೈಸೂರು ರಸ್ತೆ ವೃಷಭಾವತಿ ನಾಲೆಗೆ ಶವ ಎಸೆದಿದ್ದರು ಎಂದು ಸರ್ಕಾರಿ ಅಭಿಯೋಜಕ ಕೆ. ಮೋಹನ್ ಕುಮಾರ್ ತಿಳಿಸಿದರು.