ಅನೈತಿಕ ಸಂಬಂಧ ನಿರಾಕರಿಸಿದ ಮಹಿಳೆಯ ಕೊಲೆ, ಅಪರಾಧಿಗೆ 10 ವರ್ಷ ಜೈಲು

High court logo
Published on

ಗದಗ: ಮಹಿಳೆಯನ್ನು ನೇಣು ಬಿಗಿದು ಕೊಲೆ ಮಾಡಿದ್ದ ವ್ಯಕ್ತಿಯೊಬ್ಬನಿಗೆ ಬುಧವಾರ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ತಾಲೂಕಿನ ಹರ್ತಿ ಗ್ರಾಮದ ಹನುಮಂತಪ್ಪ ದುರುಗಪ್ಪ ಬಂಡಿವಡ್ಡರ ಎಂಬುವವನು ಅನೈತಿಕ ಸಂಬಂಧ ನಿರಾಕರಿಸಿದ್ದರಿಂದ 2015ರ ಅಕ್ಟೋಬರ್ 2ರಂದು ರಾತ್ರಿ ಅದೇ ಗ್ರಾಮದ ಲಕ್ಷ್ಮವ್ವ ಬಸಪ್ಪ ಅಸುಂಡಿ (40) ಅವರನ್ನು ನೇಣಿಗೆ ಹಾಕಿದ್ದ. ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮಹಿಳೆಯು 2015ರ ಅಕ್ಟೋಬರ್ 24ರಂದು ಮೃತಪಟ್ಟಿದ್ದರು. ಈ ಕುರಿತು ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
2015ರ ನವೆಂಬರ್ 25ರಂದು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ಕೊಲೆ ಮಾಡಿರುವುದು ಸಾಬೀತಾಗಿದ್ದರಿಂದ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜೇಶ್ವರ ಎಸ್. ಶೆಟ್ಟಿ ಅವರು 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕರಾದ ಸವಿತಾ ಎಂ. ಶಿಗ್ಲಿ, ಎಂ.ಬಿ. ದೊಡ್ಡಗೌಡರ ವಾದ ಮಂಡಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net