ಜತೆಯಲ್ಲಿ ಮದ್ಯ ಸೇವಿಸಲೊಪ್ಪದವನ ಕೊಲೆ

09_05_2025_KLR_PAGE_5
Published on

ಬೇತಮಂಗಲ : ಮದ್ಯ ಸೇವಿಸುತ್ತಿದ್ದ ಎರಡು ಗುಂಪಿನ ನಡುವೆ ಆರಂಭಗೊಂಡ ಗಲಾಟೆಯಲ್ಲಿ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

ಕೊಂಡಹಳ್ಳಿಯ ನಂದೀಶ್​ ರೆಡ್ಡಿ (30) ಕೊಲೆಯಾದ ಯುವಕ. ಮುಳಬಾಗಿಲು ರಸ್ತೆಯ ವೆಂಕಟಾಪುರದ ಭಾಸ್ಕರ್​ ಕೊಲೆ ಆರೋಪಿ.

ಬೇತಮಂಗಲ ಪೊಲೀಸ್​ ಠಾಣೆ ವ್ಯಾಪ್ತಿಯ ಕೆಜಿಎಫ್​& ಮುಳಬಾಗಿಲು ಮುಖ್ಯ ರಸ್ತೆಯ ಗುಟ್ಟಹಳ್ಳಿ ಬಳಿಯ ಬಾರ್​ ಆ್ಯಂಡ್​ ರೆಸ್ಟೋರೆಂಟ್​ನಲ್ಲಿ ಬುಧವಾರ ರಾತ್ರಿ ಭಾಸ್ಕರ್​ ಮತ್ತು ಕೊಂಡಹಳ್ಳಿ ಚಂದ್ರಶೇಖರ್​, ಚಂದುಕುಮಾರ್​ ಮತ್ತವರ ತಂಡ ಹಾಗೂ ನಂದೀಶ್​ರೆಡ್ಡಿ ಹಾಗೂ ಸಂಬಂಧಿ ಬಾಬುರೆಡ್ಡಿ ಮತ್ತಿತರರೊಂದಿಗೆ ಮದ್ಯ ಸೇವಿಸಲು ತೆರಳಿದ್ದರು.

ಭಾಸ್ಕರ್​ಗೆ ನಂದೀಶ್​ರೆಡ್ಡಿ ಪರಿಚಯ ಇಲ್ಲದಿದ್ದರೂ ಜತೆಯಲ್ಲೇ ಮದ್ಯ ಸೇವನೆಗೆ ಕರೆದಿದ್ದಾನೆ. ಆದರೆ, ನಂದೀಶ್​ರೆಡ್ಡಿ ಪ್ರತ್ಯೇಕವಾಗಿ ಕುಳಿತುಕೊಳ್ಳಲು ತೆರಳಿದ ವೇಳೆ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಸ್ಥಳದಲ್ಲಿದ್ದವರು ಇಬ್ಬರನ್ನೂ ಸಮಾಧಾನ ಮಾಡಿದ್ದಾರೆ. ನಂತರ ಇಬ್ಬರೂ ಮನೆಗಳಿಗೆ ತೆರಳಿದ್ದು, ಮತ್ತೆ ಸ್ವಲ್ಪ ಹೊತ್ತಿನ ನಂತರ ಅದೇ ಸ್ಥಳಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಭಾಸ್ಕರ್​ ನಂದೀಶ್​ರೆಡ್ಡಿ ಮೇಲೆ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದು, ಜಗಳ ಬಿಡಿಸಲು ಮುಂದಾದವರಿಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ, ತೀವ್ರವಾಗಿ ಹಲ್ಲೆ ನಡೆಸಿದ್ದರಿಂದ ಆತ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಅಷ್ಟಕ್ಕೇ ಸುಮ್ಮನಾಗದ ಭಾಸ್ಕರ್​, ಹಲವು ಬಾರಿ ಚಾಕುವಿನಿಂದ ಇರಿದಿ ಪರಾರಿಯಾಗಿದ್ದಾನೆ. ಕೊಲೆ ದೃಶ್ಯ ಬಾರ್​ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾತ್ರಿಯೇ ಸ್ಥಳ ಪರಿಶೀಲನೆ ನಡೆಸಿದ್ದ ಕೆಜಿಎಫ್​ ಎಸ್​ಪಿ ಶಾಂತಕುಮಾರ್​ ಆರೋಪಿಯನ್ನು ಬಂಧಿಸಿದ್ದಾರೆ.

ನೀಲಗಿರಿ ತೋಪಿನಲ್ಲಿದ್ದ ಆರೋಪಿ : ಆರೋಪಿ ಬೆಂಗಳೂರಿನಲ್ಲಿ ಸಿನಿಮಾ ಹೀರೋಗಳಿಗೆ ಫೈಟಿಂಗ್​ ಮತ್ತು ಸ್ಟಂಟ್​ ಹೇಳಿಕೊಡುತ್ತಿದ್ದ ಎನ್ನಲಾಗಿದ್ದು, ನಾನು ಸೆಲೆಬ್ರಿಟಿ, ನನ್ನನ್ನು ಯಾರೂ ಏನೂ ಮಾಡಲು ಆಗುವುದಿಲ್ಲ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಎನ್ನಲಾಗಿದೆ. ಕೊಲೆ ಮಾಡಿದ ನಂತರ ಗುತ್ತಹಳ್ಳಿ & ಅವನಿ ರಸ್ತೆಯಲ್ಲಿರುವ ನೀಲಗಿರಿ ತೋಪಿನಲ್ಲಿ ಅವಿತುಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಬೇತಮಂಗಲ ವೃತ್ತ ನಿರೀಕ್ಷಕ ರಂಗಸ್ವಾಮಯ್ಯ, ಪಿಎಸ್​ಐ ಗುರುರಾಜ ಚಿಂತಕಲ್​ ಮತ್ತು ತಂಡದವರು ದಾಳಿ ನಡೆಸಿ ಬಂಧಿಸಿದ್ದಾರೆ. ಬೆಂಗಳೂರಿನ ಕೆ.ಆರ್​.ಪುರ ವ್ಯಾಪ್ತಿಯ ಪೊಲೀಸ್​ ಠಾಣೆಗಳಲ್ಲಿ ಭಾಸ್ಕರ್​ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net