ಮನೆಯ ಟೆರೇಸ್​ನಲ್ಲೇ ಹೆಣವಾಗಿ ಬಿದ್ದಿದ್ದ ವ್ಯಕ್ತಿ; ಕುಟುಂಬಸ್ಥರೇ ಕೊಲೆ ಮಾಡಿಸಿದ್ರಾ?

Crime
Published on

ಬೆಂಗಳೂರು: ವ್ಯಕ್ತಿಯೊಬ್ಬ ತಾನು ನೆಲೆಸಿದ್ದ ಮನೆಯ ಟೆರೇಸ್​ನಲ್ಲೇ ಹೆಣವಾಗಿ ಬಿದ್ದಿರುವ ಪ್ರಕರಣವೊಂದು ನಡೆದಿದೆ. ಈತನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಈ ಕೊಲೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.

ಮೂಲತಃ ಆಂಧ್ರಪ್ರದೇಶದ ಹಿಂದೂಪುರ ನಿವಾಸಿ ಚಂದ್ರಶೇಖರ್ (33) ಕೊಲೆಯಾದ ವ್ಯಕ್ತಿ. ಹಳೇ ಯಲಹಂಕದ ಕೊಂಡಪ್ಪ ಲೇಔಟ್‌ನಲ್ಲಿ ಮೂರು ಅಂತಸ್ತಿನ ಮನೆಯಿದ್ದು, ಒಂದು ಮನೆಯಲ್ಲಿ ಚಂದ್ರಶೇಖರ್ ದಂಪತಿ ವಾಸವಾಗಿದ್ದು, ಚಂದ್ರಶೇಖರ್ ನೇಯ್ಗೆ ಕೆಲಸ ಮಾಡುತ್ತಿದ್ದರು. ಶುಕ್ರವಾರ ರಾತ್ರಿ 8.30ರ ಸುಮಾರಿನಲ್ಲಿ ಮನೆಯ ಟೆರೇಸ್‌ನಲ್ಲಿ ಚಂದ್ರಶೇಖರ್ ಅವರ ಮೇಲೆ ಆರೋಪಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಟುಂಬದವರು ನೋಡಿ ತಕ್ಷಣ ಚಂದ್ರಶೇಖರ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಯಲಹಂಕ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ಕೈಗೊಂಡಿದ್ದಾರೆ.

ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕುಟುಂಬಸ್ಥರೇ ಚಂದ್ರಶೇಖರ್ ಅವರನ್ನು ಕೊಲೆ ಮಾಡಿಸಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net