

ಮೈಸೂರು: ದಸರಾದಲ್ಲಿ ಹೊಟ್ಟೆಪಾಡಿಗಾಗಿ ಬಲೂನ್ ಮಾರಲು ಬಂದಿದ್ದ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ನಡೆಸಿ ಹತ್ಯೆಗೈದಿರುವು ದನ್ನು ಖಂಡಿಸಿ ಹಳೇ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಎಐಎಂಎಸ್‌ಎಸ್, ಎಐಡಿಎಸ್‌ಒ ಹಾಗೂ ರಾಜ್ಯ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.
ಎಐಎಂಎಸ್‌ಎಸ್ ರಾಜ್ಯ ಉಪಾಧ್ಯಕ್ಷೆ ಸೀಮಾ ಮಾತನಾಡಿ, ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿ ಭೀಕರವಾಗಿ ಹತ್ಯೆಗೈಯ್ಯಲಾಗಿರುವ ಹೃದಯವಿದ್ರಾವಕ ಘಟನೆಯಿಂದಾಗಿ ಸಾಂಸ್ಕೃತಿಕ ನಗರಿಯ ಜನತೆಯಲ್ಲಿ ಆಘಾತ ಉಂಟಾಗಿದೆ. ದಸರದಲ್ಲಿ ತಮ್ಮ ಜೀವನೋಪಾಯಕ್ಕಾಗಿ ದುಡಿಯಲು ಬಂದ ವಲಸೆ ಕಾರ್ಮಿಕರು ತಮ್ಮ ಮಗಳ ದುರಂತ ಅಂತ್ಯವನ್ನು ಕಾಣುವಂತಾಗಿದೆ. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಸರ್ಕಾರಗಳು ತಕ್ಷಣ ಎಲ್ಲ ರೀತಿಯ ಕ್ರಮ ವಹಿಸಬೇಕು. ಇದರ ಕುರಿತು ಸಮಗ್ರ ತನಿಖೆಯನ್ನು ನಡೆಸಿ ಅಪರಾಧಿಗೆ ಉಗ್ರ ಶಿಕ್ಷೆಯನ್ನು ವಿಧಿಸಬೇಕು ಎಂದು ಆಗ್ರಹಿಸಿದರು.
ಮೃತ ಬಾಲಕಿಯ ಪಾಲಕರಿಗೆ ಸೂಕ್ತ ಪರಿಹಾರ‌್ನ ಒದಗಿಸಬೇಕು, ಈ ಘಟನೆಯ ನ್ಯಾಯ ನಿರ್ಣಯದಲ್ಲಿ ಯಾವುದೇ ರೀತಿಯ ವಿಳಂಬವಾಗಬಾರದು. ಹಾಗೆಯೇ ಸಮಾಜದಲ್ಲಿ ವಿಷದಂತೆ ಹರಡುತ್ತಿರುವ ಅಶ್ಲೀಲ ಸಿನಿಮಾ ಸಾಹಿತ್ಯಗಳಿಗೆ, ಕುಡಿತ, ಜೂಜು ಮದ್ಯ ಮಾದಕ ವಸ್ತು ಸೇವನೆ, ಮಾರಾಟಕ್ಕೂ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.
ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ನಿತಿನ್ ಮಾತನಾಡಿ, ಬಾಲ ಕಾರ್ಮಿಕಳಾಗಿದ್ದ ಹೆಣ್ಣು ಮಗು ಮೇಲೆ ಪೈಶಾಚಿಕ ಕೃತ್ಯಕ್ಕೆ ಎಸಗಿರುವುದು ಖಂಡನೀಯ. ಸಮಾಜದಲ್ಲಿ ಭಗತ್ ಸಿಂಗ್, ನೇತಾಜಿ ಅಂತಹ ಆದರ್ಶ ಮೌಲ್ಯಗಳು ಇಲ್ಲದಿರುವುದು ಇಂತಹ ಘಟನೆಗಳು ಹೆಚ್ಚುವುದಕ್ಕೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಆಸಿಯಾ ಬೇಗಂ, ಸಾಮಾಜಿಕ ಹೋರಾಟಗಾರ ಉಗ್ರ ನರಸಿಂಹ ಗೌಡ, ಹಿರಿಯ ವಕೀಲ ಬಾಬು ರಾಜನ್, ಸಮತಾ ವೇದಿಕೆಯ ರತಿರಾವ್ ಹಾಗೂ ಇತರರು ಪಾಲ್ಗೊಂಡಿದ್ದರು.