ಕುಡಿದ ಮತ್ತಿನಲ್ಲಿ ಸ್ನೇಹಿತನ ಕೊಲೆ

MOHAN
ಮೋಹನ
Published on

ಕೆ.ಆರ್.ಸಾಗರ: ಬೆಳಗೊಳ ಗ್ರಾಮದಲ್ಲಿನ ಕೋಟೆಮಾಳದಲ್ಲಿ ಬುಧವಾರ ಮಧ್ಯರಾತ್ರಿ ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಆರಂಭವಾದ ಕಲಹ ಕೊಲೆಯಲ್ಲಿ ಅಂತ್ಯವಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಗ್ರಾಮದ ನಿವಾಸಿ ಮೋಹನ(44) ಮೃತರು. ಈತನ ಸ್ನೇಹಿತನ ರವಿಚಂದ್ರ(44) ಕೊಲೆ ಆರೋಪಿ. ಮೋಹನ ಹಾಗೂ ರವಿಚಂದ್ರ ಇಬ್ಬರು ಸ್ನೇಹಿತರಾಗಿದ್ದು, ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ಬುಧವಾರ ರಾತ್ರಿ ಮೋಹನ್ ತನ್ನ ಮನೆಯಲ್ಲಿ ರವಿಚಂದ್ರನನ್ನು ಕರೆಸಿಕೊಂಡು ಮದ್ಯದ ಪಾರ್ಟಿ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಮೋಹನ ತನ್ನ ಸ್ನೇಹಿತ ರವಿಚಂದ್ರನಿಗೆ ಆತನ ಮಕ್ಕಳು ಹಾಗೂ ಪತ್ನಿ ಬಗ್ಗೆ ಅವಾಚ್ಯವಾಗಿ ನಿಂದಿಸಿದ ಎನ್ನಲಾಗಿದೆ. ಈ ವೇಳೆ ಇಬ್ಬರ ನಡುವೆ ಜಗಳ ಏರ್ಪಟ್ಟಿದೆ. ಕುಪಿತನಾದ ರವಿಚಂದ್ರ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ.

ಗಸ್ತಿನಲ್ಲಿದ್ದ ಪೊಲೀಸರು ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ರವಿಚಂದ್ರಗಾಗಿ ಹುಡುಕಾಟ ನಡೆಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಮಾಹಿತಿ ಪಡೆದರು.

ರಾತ್ರಿಯೆ ಡಿವೈಎಸ್ಪಿ ಶಾಂತಮಲ್ಲಪ್ಪ ಭೇಟಿ ನೀಡಿ ಆರೋಪಿ ಬಂಧನಕ್ಕೆ ತಂಡ ರಚಿಸಿದ್ದರು. ಗುರುವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಬೆಳಗೊಳ ಪೈಪ್‌ಲೈನ್ ರಸ್ತೆಯಲ್ಲಿ ಆರೋಪಿ ರವಿಚಂದ್ರನನ್ನು ಬಂಧಿಸಿದ್ದಾರೆ.

ಡಿವೈಎಸ್ಪಿ ಶಾಂತಮಲ್ಲಪ್ಪ ಮಾರ್ಗದರ್ಶನ ಹಾಗೂ ಸಿಪಿಐ ಪುನೀತ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸೈಗಳಾದ ರಮೇಶ ಕರ್ಕಿಕಟ್ಟೆ, ಸುಸ್ಮಿತಾ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net