ಚೂರಿಯಿಂದ ಇರಿದು ಮಹಿಳೆಯ ಹತ್ಯೆ

Murder
Published on

ವಿಟ್ಲ: ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ನೇರಳಕಟ್ಟೆ ಎಂಬಲ್ಲಿ ಸೋಮವಾರ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹಿಳೆಯನ್ನು ಅಡ್ಡಗಟ್ಟಿದ ಯುವಕನೊಬ್ಬ ಚೂರಿಯಿಂದ ಇರಿದು ಹತ್ಯೆಗೈದಿದ್ದಾನೆ.

ಪುತ್ತೂರಿನ ಬಂಟರ ಭವನ ಬಳಿ ಹೋಟೆಲ್ ಹೊಂದಿರುವ ಬಂಟ್ವಾಳ ತಾಲೂಕಿನ ನೆಟ್ಲಮುಡ್ನೂರು ಗ್ರಾಮದ ದೇವಿನಗರದ ಕ್ವಾರ್ಟರ್ಸ್ ನಿವಾಸಿ ಶಕುಂತಳಾ(36) ಮೃತರು. ಚೂರಿ ಇರಿತದಿಂದ ಗಂಭೀರ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರೂ ವಿಪರೀತ ರಕ್ತಸ್ರಾವಕ್ಕೆ ಒಳಗಾಗಿ ಮೃತಪಟ್ಟರು.

ಪ್ರತ್ಯಕ್ಷದರ್ಶಿಗಳ ಪ್ರಕಾರ ಮಹಿಳೆ ಸ್ಕೂಟರ್‌ನಲ್ಲಿ ಚಲಿಸುತ್ತಿದ್ದಾಗ ಆಟೋದಲ್ಲಿ ಬಂದ ಯುವಕ ಅವರನ್ನು ಅಡ್ಡಗಟ್ಟಿ ತಡೆದಿದ್ದಾನೆ. ಕೆಲಸಮಯ ಅವರಿಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಬಳಿಕ ಯುವಕ ಮಹಿಳೆಗೆ ಚೂರಿಯಿಂದ ಇರಿದಿದ್ದಾನೆ. ಗಂಭೀರ ಗಾಯಗೊಂಡ ಅವರು ಕುಸಿದು ಬಿದ್ದಿದ್ದಾರೆ. ಈ ವೇಳೆ ಯುವಕ ಸ್ಥಳದಿಂದ ಪರಾರಿಯಾಗಿದ್ದು ಪೆರಾಜೆ ಕಡೆ ಓಡಿ ಹೋಗಿದ್ದಾನೆ ಎನ್ನಲಾಗಿದೆ.

ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ. ಆದರೆ ಜನನಿಬಿಡ ಪ್ರದೇಶದಲ್ಲಿ ಹಾಡಹಗಲೇ ನಡೆದ ಈ ಘಟನೆ ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸಿದೆ. ಮಹಿಳೆ ಅಂತರ್ಜಾತಿಯ ವಿವಾಹವಾಗಿದ್ದು ಮೂವರು ಮಕ್ಕಳನ್ನು ಹೊಂದಿದ್ದಾರೆ. ಪತಿ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದಾರೆ. ಮಹಿಳೆ ಹಾಗೂ ಆಕೆಯ ಸಹೋದರಿ ಸೇರಿ ಸಣ್ಣ ಕ್ಯಾಂಟೀನ್ ನಡೆಸುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net