

ಕಾಸರಗೋಡು: ಜಿಲ್ಲೆಯ ಹೊಸದುರ್ಗ ತಾಲೂಕಿನ ರಾವಣೀಶ್ವರಂನ ಸುಶೀಲಾ ಗೋಪಾಲನ್ ನಗರದಲ್ಲಿ ಸೋಮವಾರ ನಡೆದಿದ್ದ ಕೂಲಿ ಕಾರ್ಮಿಕ ನೀಲಕಂಠನ್ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಮಹತ್ವದ ಸುಳಿವು ಲಭಿಸಿದೆ.
ಕೆಲಸ ಮುಗಿಸಿ ಕೂಲಿ ಕೇಳಿದಾಗ 200 ರೂ.ಕಡಿಮೆ ನೀಡಿದ್ದ ವಿಷಯದಲ್ಲಿ ನೀಲಕಂಠನ್ ಮತ್ತು ಆರೋಪಿ ಗಣೇಶನ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಈ ವಾಗ್ವಾದವೇ ಕೊಲೆಯಲ್ಲಿ ಪರ್ಯವಸಾನಗೊಂಡಿರಬೇಕು ಎಂದು ಪೊಲೀಶರು ಶಂಕಿಸಿದ್ದಾರೆ.
ಆರೋಪಿ ಗಣೇಶನ್ ಹತ್ಯೆಗೀಡಾದ ನೀಲಕಂಠನ್ ಅವರ ತಂಗಿಯ ಪತಿಯಾಗಿದ್ದು, ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪೊಲೀಸರ ತಂಡ ಆರೋಪಿಯ ಶೋಧದಲ್ಲಿ ತೊಡಗಿದೆ. ಆರೋಪಿಯ ಫೋನ್ ಸ್ವಿಚ್ಡ್ ಆಫ್ ಆಗಿದೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.
ಸೋಮವಾರ ನೀಲಕಂಠನ್ ಅವರ ಮೃತದೇಹ ಕತ್ತು ಸೀಳಿದ ಸ್ಥಿತಿಯಲ್ಲಿ ಮನೆಯಲ್ಲಿ ಪತ್ತೆಯಾಗಿತ್ತು.