ಮಾರಕಾಸ್ತ್ರಗಳಿಂದ ಕೊಲೆ, ಹುಬ್ಬಳ್ಳಿಯಲ್ಲಿ ಮತ್ತೊಂದು ಆಘಾತಕಾರಿ ಘಟನೆ

Published on

ಹುಬ್ಬಳ್ಳಿ: ಇಲ್ಲಿಯ ಗದಗ ರಸ್ತೆ ಹೊರವಲಯದಲ್ಲಿ ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ ಘಟನೆ ಗುರುವಾರ ತಡರಾತ್ರಿ ಸಂಭವಿಸಿದೆ. ಹಲವು ದಿನಗಳ ನಂತರ ನಗರದಲ್ಲಿ ಮತ್ತೆ ಆಘಾತಕಾರಿ ಘಟನೆ ನಡೆದಿದ್ದು, ಪೈಶಾಚಿಕ ಕೃತ್ಯ ಮರುಕಳಿಸಿದಂತಾಗಿದೆ.

ಗದಗ ರಸ್ತೆಯಲ್ಲಿ ಹಂದಿ ಸಾಕಾಣಿಕೆ ಹಾಗೂ ಮಾರಾಟ ಮಾಡುತ್ತಿದ್ದ ಸ್ಯಾಮಿಯೋಲ್ (28) ಎಂಬಾತನೇ ಕೊಲೆಯಾದ ವ್ಯಕ್ತಿ.

ಗುರುವಾರ ತಡರಾತ್ರಿ ಈತನನ್ನು ಕರೆದುಕೊಂಡು ಹೋಗಿ ಗದಗ ರಸ್ತೆ ಬಳಿ ಕೊಲೆ ಮಾಡಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಹೋದಾಗ ಕಾಲುವೆಯಲ್ಲಿ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆರೋಪಿಗಳು ಯಾರೆಂಬುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ. ಶೀಘ್ರ ಅವರನ್ನು ಬಂಧಿಸಲಾಗುವುದು. ಸದ್ಯಕ್ಕೆ ಅನುಮಾನಾಸ್ಪದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸುದ್ದಿಗಾರರಿಗೆ ತಿಳಿಸಿದರು.

ಈ ಕುರಿತು ಕೊಲೆಯಾದ ವ್ಯಕ್ತಿಯ ಪತ್ನಿ ದೂರು ನೀಡಿದ್ದು, ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆಗೆ ಕಾರಣ ಪತ್ತೆ ಮಾಡಲಾಗುತ್ತಿದೆ. ಸದ್ಯಕ್ಕೆ ಹಣಕಾಸಿನ ವಿಚಾರ, ವೈಯಕ್ತಿಕ ವಿಷಯಗಳು ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಕೊಲೆಗಾರರನ್ನು ಶೀಘ್ರ ಬಂಧಿಸಲಾಗುವುದು. ಆ ನಂತರವೇ ನಿಜ ಸಂಗತಿ ತಿಳಿಯಲಿದೆ. ಒಟ್ಟಾರೆ, ಇದು ತೀರಾ ವ್ಯವಸ್ಥಿತ ಕೊಲೆ ಎಂದು ಆಯುಕ್ತರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net