

ಹುಬ್ಬಳ್ಳಿ: ತಾಯಿಗೆ ನಿಂದಿಸಿದನೆಂಬ ಕಾರಣಕ್ಕೆ ಭಿಕ್ಷಕರಿಬ್ಬರ ನಡುವೆ ಭಾನುವಾರ ರಾತ್ರಿ ಜಗಳವಾಗಿ ಕೊಲೆಯಲ್ಲಿ ಅಂತ್ಯ ಕಂಡ ಘಟನೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆಸಾರ ಓಣಿ ರಸ್ತೆಯ ದಿಡ್ಡಿ ಓಣಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ, ಬಿಹಾರ ರಾಜ್ಯದ ಬಿಸ್ನಾಪುರ ಗ್ರಾಮದ ಅಂಗವಿಕಲ ಮಿಥಿಲೇಶಕುಮಾರ ಪಾಸ್ವಾನ(29) ಕೊಲೆಯಾದ ವ್ಯಕ್ತಿ.
ತಾಯಿಗೆ ಅವಾಚ್ಯವಾಗಿ ಬೈದ ಎಂಬ ಕಾರಣಕ್ಕೆ ಆರೋಪಿ ಬಿಹಾರ ರಾಜ್ಯದ ರಾಜೇಶ ಕುಮಾರ ಅಲಿಯಾಸ್ ನಜೀರ್ ಖಾನ್ ಹತ್ಯೆ ಮಾಡಿದ್ದಾನೆ ಎಂದು ದೂರು ದಾಖಲಾಗಿದೆ. ಹಳೇಹುಬ್ಬಳ್ಳಿ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಆರೋಪಿಯನ್ನು ಬಂಧಿಸಿ, ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.
ಪೊಲೀಸ್ ಆಯುಕ್ತ ಭೇಟಿ: ಘಟನಾ ಸ್ಥಳ ಹಾಗೂ ಕೆಎಂಸಿಆರ್‌ಐಗೆ ಭೇಟಿ ನೀಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಹಾರ ರಾಜ್ಯದ ಮಿಥಿಲೇಶಕುಮಾರ ಹಾಗೂ ರಾಜೇಶಕುಮಾರ ಇಬ್ಬರು ಭಿಕ್ಷಕರಾಗಿದ್ದು, ದಿಡ್ಡಿ ಓಣಿಯಲ್ಲಿ ವಾಸವಾಗಿದ್ದಾರೆ. ಕಳೆದ ರಾತ್ರಿ ಮನೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಭಿಕ್ಷೆಗೆ ಬಳಸುತ್ತಿದ್ದ ಮೈಕ್ ಸ್ಟಾೃಂಡ್‌ನಿಂದ ತಲೆಗೆ ಹೊಡೆದಿರುವುದರಿಂದ ಕೆಎಂಸಿಆರ್‌ಐಗೆ ತರುವಷ್ಟರಲ್ಲಿ ಗಾಯಾಳು ಮೃತಪಟ್ಟಿದ್ದಾನೆ ಎಂದರು.
ಪೊಲಿಯೋದಿಂದ ಮೃತ ವ್ಯಕ್ತಿ ಕಾಲು ಕಳೆದುಕೊಂಡಿದ್ದು, ಆರೋಪಿಯು ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದಾನೆ. ಇಬ್ಬರು ಸ್ನೇಹಿತರಾಗಿದ್ದು ಜತೆಯಾಗಿಯೇ ಭಿಕ್ಷೆ ಬೇಡುತ್ತಿದ್ದರು. ದಿಡ್ಡಿ ಓಣಿಯಲ್ಲಿ ಕುಟುಂಬದವರೊಂದಿಗೆ ವಾಸವಾಗಿದ್ದರು. ಹಬ್ಬದ ಹಿನ್ನೆಲೆಯಲ್ಲಿ ಉಳಿದವರು ಊರಿಗೆ ಹೋದಾಗ ಮತ್ತಿನಲ್ಲಿ ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ. ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದರು.