

ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ದೊಡ್ಡಬೆಳವಂಗಲ
ಮದ್ಯವ್ಯಸನಿಯಾಗಿದ್ದ ಮಗ ಮನೆಯಲ್ಲಿ ವಿನಾಕಾರಣ ಕಿರುಕುಳ ನೀಡುತ್ತಿದ್ದ ಎಂಬ ಕಾರಣಕ್ಕೆ ಬೇಸತ್ತ ತಂದೆ ಹಲ್ಲೆ ನಡೆಸಿ ಹತ್ಯೆ ಮಾಡಿದ ಬಳಿಕ ಶವ ಹೊತ್ತೊಯ್ದು ಹೊಲದಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಪ್ರಕರಣ ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ಹೋಬಳಿಯ ವಾಣಿಗರಹಳ್ಳಿಯಲ್ಲಿ ಶನಿವಾರ ಬೆಳಕಿಗೆ ಬಂದಿದೆ.
ಮಗ ಆದರ್ಶ್(28) ಮೃತಪಟ್ಟಿದ್ದು, ಆರೋಪಿ ತಂದೆ ಜಯರಾಮಯ್ಯ(58) ಎಂಬುವರನ್ನು ದೊಡ್ಡಬೆಳವಂಗಲ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಾಯಿಯನ್ನು ಥಳಿಸಿದ್ದ: ಮದ್ಯವ್ಯಸನಿಯಾಗಿದ್ದ ಆದರ್ಶ್ ಯಾವುದೇ ಕೆಲಸಕ್ಕೆ ಹೋಗದೆ ಹಣಕ್ಕಾಗಿ ಪ್ರತಿದಿನ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಸಾಕಷ್ಟು ಬುದ್ಧಿ ಹೇಳಿದರೂ ಕೇಳದೆ ಪ್ರತಿನಿತ್ಯ ಮದ್ಯಸೇವಿಸಿ ಕಿರಿಕಿರಿ ಮಾಡುತ್ತಿದ್ದ. ಅದೇ ರೀತಿ ಗುರುವಾರ ಸಂಜೆ ತಾಯಿಯ ಬಳಿ ಹಣ ಕೇಳಿದ್ದಾನೆ. ಹಣ ನೀಡಲು ಒಪ್ಪದಿದ್ದಾಗ ತಾಯಿಯನ್ನೇ ಮನಬಂದಂತೆ ಥಳಿಸಿ ಹಣ ಕಿತ್ತುಕೊಂಡಿದ್ದಾನೆ ಎನ್ನಲಾಗಿದೆ.
ವೈನ್‌ಶಾಪ್‌ನಿಂದ ಕರೆತಂದ ತಂದೆ:
ವಿಷಯ ತಿಳಿದ ತಂದೆ ಜಯರಾಮಯ್ಯ, ತೀವ್ರ ಆಕ್ರೋಶಗೊಂಡು ಮಗನ ಹುಡುಕಾಟ ನಡೆಸಿದ್ದ. ಆ ವೇಳೆಗಾಗಲೇ ಗ್ರಾಮದ ವೈನ್‌ಶಾಪ್‌ವೊಂದರ ಬಳಿ ಕಂಡುಬಂದಿದ್ದಾನೆೆ. ನೇರವಾಗಿ ಅಲ್ಲಿಗೆ ತೆರಳಿ ಮಗನಿಗೆ ಥಳಿಸಿದ್ದಾರೆೆ. ಈ ವೇಳೆ ಆದರ್ಶ ಕುಸಿದು ಬಿದ್ದು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ.
ಹೊಲದಲ್ಲಿ ಬೆಂಕಿ: ಮಗನ ಶವವನ್ನು ಎತ್ತಿಕೊಂಡು ಹೊಲಕ್ಕೆ ಬಂದ ಆರೋಪಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಎಎಸ್ಪಿ ಪುರುಷೋತ್ತಮ್ ಹಾಗೂ ದೊಡ್ಡಬೆಳವಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.