

ಹತ್ಯೆಯನ್ನು ಅಪಘಾತವೆಂದು ಎಫ್‌ಐಆರ್ ದಾಖಲು ಮುಸ್ಲಿಂ ಸಂಘದ ರಾಜ್ಯಾಧ್ಯಕ್ಷ ಎಲ್.ಎಸ್.ಬಷೀರ್ ಅಹಮ್ಮದ್ ಆರೋಪ
ಹೊಸಪೇಟೆ: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಮಾಚೇನಹಳ್ಳಿ ತಾಂಡ ಬಳಿ ಸಂಭವಿಸಿರುವ ಕೊಲೆ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರದಿಂದ ಪೊಲೀಸರು ಅಪಘಾತವನ್ನಾಗಿ ಬಿಂಬಿಸುತ್ತಿದ್ದಾರೆ ಎಂದು ಮುಸ್ಲಿಂ ಸಂಘದ ರಾಜ್ಯಾಧ್ಯಕ್ಷ ಎಲ್.ಎಸ್.ಬಷೀರ್ ಅಹಮ್ಮದ್ ಗಂಭೀರವಾಗಿ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಡೂರು ತಾಲೂಕಿನ ದೋಣಿಮಲೈ ನಿವಾಸಿ ಮಹಮ್ಮದ್ ಇದ್ರಿಸ್ ಅವರ ಮಗ ಫೈಯಾಜ್(೨೭) ಎಂಬಾತ ತಮ್ಮದೇ ಸಮುದಾಯದ ಕೂಡ್ಲಿಗಿ ಪಟ್ಟಣದ ನಿವಾಸಿ ಹಾಗೂ ದಾವಣಗೆರೆಯಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಪರಸ್ಪರ ಪ್ರೀತಿಸುತ್ತಿದ್ದರು. ಇದನ್ನು ಸಹಿಸದ ಯುವತಿ ಪೋಷಕರು ಕೂಡ್ಲಿಗಿಯ ಸಿದ್ಧಾರ್ಥ ರೈ ಎಂಬುವವರ ಮೂಲಕ ಒಂದೆರಡು ಬಾರಿ ಬೆದರಿಕೆ ಹಾಕಿಸಿದ್ದರು. ಅದರ ಬೆನ್ನಲ್ಲೇ, ಜೂನ್ ೧೬ ರಂದು ಯುವತಿ ಮೂಲಕ ಫೈಯಾಜ್‌ನನ್ನು ಮಾಚೇನಹಳ್ಳಿ ತಾಂಡ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆಯಿಸಿಕೊಂಡು ಹತ್ಯೆ ಮಾಡಿದ್ದಾರೆ ಎಂದು ದೂರಿದರು.
ಆದರೆ, ಈ ಕೃತ್ಯವನ್ನು ಮರೆಮಾಚಲು ಬೈಕ್ ಅಪಘಾತದಲ್ಲಿ ಫಯಾಜ್ ಮೃತಪಟ್ಟಿರುವಂತೆ ಬಿಂಬಿಸುತ್ತಿದ್ದಾರೆ. ಮೃತ ಫಯಾಜ್ ಮುಖ ಭಾಗಶಃ ನಜ್ಜುಗುಜ್ಜಾಗಿದೆ. ಕೈಗಳು ಹಾಗೂ ಮರ್ಮಾಂಗಕ್ಕೆ ಪೆಟ್ಟಾಗಿದೆ. ಈ ವೇಳೆ ಫೈಯಾಜ್‌ನೊಂದಿಗೆ ಬೈಕ್‌ನಲ್ಲಿದ್ದ ಪ್ರಯತಮೆಗೆ ಸಣ್ಣ ಗಾಯವೂ ಆಗಿಲ್ಲ. ಘಟನೆ ಬಗ್ಗೆ ಯುವತಿಯ ಗೊಂದಲಕಾರಿ ಹೇಳಿಕೆಗಳೂ ಅನುಮಾನಕ್ಕೆ ಕಾರಣವಾಗಿವೆ ಎಂದು ತಿಳಿಸಿದರು.
ಹೀಗಾಗಿ ಘಟನೆಯನ್ನು ಕೊಲೆ ಅಥವಾ ಅನುಮಾನಾಸ್ಪದ ಸಾವು ಅಡಿ ಪ್ರಕರಣ ದಾಖಲಿಸುವಂತೆ ಹಲವು ಬಾರಿಗೆ ಮನವಿ ಮಾಡಿದರೂ, ಸುತಾರಾಂ ಒಪ್ಪುತ್ತಿಲ್ಲ. ಯುವತಿಯ ಮಾವ ಕೂಡ್ಲಿಗಿ ಪುರಸಭೆ ಸದಸ್ಯ. ಅವರ ತಂದೆ, ಸಂಬAಧಿಕರು ಕೂಡ ಸ್ಥಿತಿವಂತರಾಗಿದ್ದಾರೆ. ಹೀಗಾಗಿ ಯಾವುದೋ ಪ್ರಭಾವಕ್ಕೆ ಒಳಗಾಗಿರುವ ಹರಪನಹಳ್ಳಿ ಠಾಣೆಯ ಇನ್ಸಪೆಕ್ಟರ್ ಘಟನೆಯನ್ನು ಅಪಘಾತ ಪ್ರಕರಣವನ್ನಾಗಿ ದಾಖಲಿಸಿದ್ದು, ಆರೋಪಿಗಳ ರಕ್ಷಿಸುತ್ತಿದ್ದಾರೆ ಎಂದು ಆಪಾಧಿಸಿದರು.
ಈ ಬಗ್ಗೆ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬಳ್ಳಾರಿ ಐಜಿಪಿ ಅವರಿಗೆ ಮನವಿ ಸಲ್ಲಿಸಿದರೂ, ಪ್ರಯೋಜನವಾಗಿಲ್ಲ. ಮೇಲ್ಮೋಟಕ್ಕೆ ಸ್ಥಳೀಯ ಪೊಲೀಸರು ಕೊಲೆ ಆರೋಪಿಗಳೊಂದಿಗೆ ಶಾಮೀಲಾಗಿರುವ ಬಗ್ಗೆ ಸಂಶಯ ಕಾಡುತ್ತಿದೆ ಎಂದು ಅಳಲು ತೋಡಿಕೊಂಡರು.
ಒAದು ವಾರದಲ್ಲಿ ಈ ಘಟನೆಯನ್ನು ಕೊಲೆ ಪ್ರಕರಣವನ್ನಾಗಿ ದಾಖಲಿಸಿಕೊಂಡು, ಆರೋಪಿಗಳನ್ನು ವಿಚಾರಣೆ ನಡೆಸಬೇಕು. ಈ ಪ್ರಕರಣದ ಸತ್ಯಾಂಶವನ್ನು ಬಯಲಿಗೆಳೆಯಲು ಹರಪನಹಳ್ಳಿ ಸಿಪಿಐ ಅವರನ್ನು ಹೊರಗಿಟ್ಟು, ವಿಶೇಷ ತನಿಖಾ ತಂಡವನ್ನು ರಚಿಸಬೇಕು. ಇಲ್ಲವೇ ಮೃತನ ಕುಟುಂಬದೊAದಿಗೆ ಮುಸ್ಲಿಂ ಸಮಾಜ ಕೂಡ್ಲಿಗಿಯಿಂದ ಎಸ್ಪಿ ಕಚೇರಿ ವರೆಗೆ ಪಾದಯಾತ್ರೆ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.
ಮೃತನ ತಂದೆ ಮಹಮ್ಮದ್ ಇದ್ರೀಸ್ ಮಾತನಾಡಿ, ನೊಂದವರಿಗೆ ನ್ಯಾಯ, ರಕ್ಷಣೆ ನೀಡಬೇಕಾದ ಪೊಲೀಸರು ಆರೋಪಿಗಳ ಪರ ವಕಾಲತ್ತು ವಹಿಸುತ್ತಿದಾರೆ. ಇದರಿಂದಾಗಿ ವಿಜಯನಗರ ಪೊಲೀಸರ ನಡೆ ಬೇಲಿಯೇ ಎದ್ದು ಹೊಲ ಮೇಯ್ದಂತಿದೆ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮೃತ ಫಯಾಜ್ ಅವರ ತಾಯಿ ಖೈರುನ್ನಿಸಾ, ಮುಸ್ಲಿಂ ಸಂಘದ ಪ್ರಮುಖರಾದ ಮಹಮ್ಮದ್ ಯುಸೂಫ್ ಖಾನ್, ಇಲಿಯಾಸ್ ಖಾನ್, ಯೂನುಸ್ ಖಾನ್, ಅಬ್ದುಲ್ ರೆಹಮಾನ, ಅಬ್ದುಲ್ ಶುಕೂರ್, ಯಾಕೂಬ್ ಖಾನ್, ಮಹಮ್ಮದ್ ಇಬ್ರಾಹಿಂ ಮತ್ತಿತರರು ಇದ್ದರು.