

ಜೊಯಿಡಾ: ಬಂಗಾರದ ಆಸೆಗೆ ವೃದ್ಧೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಆಕೆಯ್ನು Murder ಮಾಡಿದ ಮಹಿಳೆಯನ್ನು ರಾಮನಗರ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ರಾಮನಗರ ಕೆಪಿಸಿ ಕಾಲನಿಯ ಪ್ರತಿಮಾ ಪ್ರಕಾಶ ಮರಾಠೆ ಬಂಧಿತೆ. ನವೆಂಬರ್ 18 ರಂದು ಕ್ಯಾಸಲ್‌ರಾಕ್ ಕಣಂಗಿಣಿ ರಸ್ತೆಯ ಲಕ್ಷ್ಮೀವಾಡ ಸಮೀಪ ವೃದ್ಧೆಯೊಬ್ಬಳು ತೀವ್ರ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆಕೆಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಟ್ಟರೂ ಆಕೆ ಸ್ಪಂದಿಸದೇ ರಾಮನಗರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು.
ದಾಂಡೇಲಿ ಡಿವೈಎಸ್‌ಪಿ ಶಿವಾನಂದ ಮದರಖಂಡಿ, ಜೊಯಿಡಾ ಸಿಪಿಐ ಚಂದ್ರಶೇಖರ ಹರಿಹರ ಅವರ ನೇತೃತ್ವದಲ್ಲಿ ರಾಮನಗರ ಪಿಎಸ್‌ಐ ಕೃಷ್ಣಕಾಂತ ಪಾಟೀಲ ಅವರು ತನಿಖೆ ನಡೆಸಿ, ಮೃತ ವೃದ್ಧೆಯನ್ನು ಕೆಪಿಸಿ ಕಾಲನಿಯ ನಿವಾಸಿ ಶಾಹಿಜಹಾನ್ ಉಸ್ಮಾನ್ ಶೇಖ್(75) ಎಂದು ಪತ್ತೆ ಹಚ್ಚಿದ್ದರು. ನಂತರ ಆಕೆಯನ್ನು ಕೊಲೆ ಮಾಡಿದವರಿಗಾಗಿ ಹುಡುಕಾಟ ನಡೆಸಿದ್ದರು. ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳು, ಸ್ಥಳೀಯರ ವಿಚಾರಣೆಯ ಸಹಾಯದಿಂದ ಕೊಲೆ ಮಾಡಿದ ಮಹಿಳೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕೊಪ್ಪಿಸಿದ್ದಾರೆ.
ಪ್ರತಿಮಾ ಸಾಲ ಮಾಡಿಕೊಂಡಿದ್ದಳು. ವೃದ್ಧೆಯ ಚಿನ್ನ ಎಗರಿಸುವ ಸಲುವಾಗಿ ಆಕೆಯನ್ನು ನಾಟಿ ಔಷಧಿ ಕೊಡುವವರ ಬಳಿ ಕರೆದೊಯ್ಯುತ್ತೇನೆಂದು ಹೇಳಿ ಕರೆದೊಯ್ದು, ಕಾಡಿನಲ್ಲಿ ಆಕೆಯ ಮೇಲೆ ಸುತ್ತಿಗೆಯಿಂದ ಹಲ್ಲೆ ಮಾಡಿ, ಆಕೆಯ ಮೈಮೇಲಿದ್ದ ಎರಡು ಬಂಗಾರದ ಬಳೆ ಹಾಗು ಒಂದು ಚೈನ್ ಎಗರಿಸಿ ಅಲ್ಲಿಂದ ಕಾಲ್ಕಿತ್ತಿದ್ದಳು ಎನ್ನಲಾಗಿದೆ.