

ಮಂಗಳೂರು: ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೈದ ಪತಿಯ ಮೇಲಿನ ಆರೋಪ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಅಪರಾಧಿಗೆ ಶಿಕ್ಷೆಯ ಪ್ರಮಾಣವನ್ನು ಜೂ.16ರಂದು ಪ್ರಕಟಿಸುವ ಸಾಧ್ಯತೆ ಇದೆ.
ಪ್ರಕರಣದ ಹಿನ್ನೆಲೆ: ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಸಮೀಪದ ನೆರಿಯ ಗ್ರಾಮದ ನೆರಿಯಕಾಡು ಕೊಟ್ಟಕ್ಕರ ನಿವಾಸಿ ಮ್ಯಾಥ್ಯು ಎಂಬವರ ಪುತ್ರ ತೋಟದ ಕೆಲಸ ಮಾಡಿಕೊಂಡಿದ್ದ ಜಾನ್ಸನ್ ಕೆ.ಎಂ. (41) ಪತ್ನಿಯ ಹತ್ಯೆ ನಡೆಸಿದ ಅಪರಾಧಿ. ಈತ ತನ್ನ ಪತ್ನಿ 36 ವರ್ಷ ಪ್ರಾಯದ ಸೌಮ್ಯ ಫ್ರಾನ್ಸಿಸ್ ಎಂಬವರೊಂದಿಗೆ 2021 ಜನವರಿ 7ರಂದು ರಾತ್ರಿ 7.30ರಿಂದ 8.30ರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿ, ಆಕೆಯ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದ. ಗಾಯಗೊಂಡು ಅಸ್ವಸ್ಥಳಾದ ಪತ್ನಿಯನ್ನು ತನ್ನ ತಂದೆ ತಾಯಂದಿರ ಜೊತೆ ಸೇರಿ ಜಾನ್ಸನ್ ಬಳಿಕ ಕಕ್ಕಿಂಜೆಯ ಆಸ್ಪತ್ರೆಗೆ ಕೊಂಡೊಯ್ದಿದ್ದ. ಗಾಯ ಗಂಭೀರವಿದ್ದ ಹಿನ್ನೆಲೆಯಲ್ಲಿ ಅಲ್ಲಿಂದ ಉಜಿರೆಯ ಆಸ್ಪತ್ರೆಗೆ ತರಲಾಗಿದ್ದು ಅಲ್ಲಿ ಆಕೆ ಮೃತಪಟ್ಟಿದ್ದರು.
ಈ ಕುರಿತು ಸೌಮ್ಯ ಅವರ ಸೋದರ ಸನೋಜ್ ಫ್ರಾನ್ಸಿಸ್ ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿದ್ದರು. ತನ್ನ ಸೋದರಿಗೆ ಮಾನಸಿಕ ದೈಹಿಕ ಹಿಂಸೆ ನೀಡಲಾಗುತ್ತಿತ್ತು, ಅಲ್ಲದೆ ಒಮ್ಮೆ ಚರ್ಚಲ್ಲೂ ಮಾತುಕತೆ ನಡೆಸಿದ್ದು, ಅದರ ಬಳಿಕವೂ ಹಿಂಸೆ ಮುಂದುವರಿದಿದ್ದ ಬಗ್ಗೆ ದೂರಿನಲ್ಲಿ ತಿಳಿಸಲಾಗಿತ್ತು. ಐಪಿಸಿ 498(ಎ) ಹಾಗೂ 302ರನ್ವಯ ಪ್ರಕರಣ ದಾಖಲಿಸಲ್ಪಟ್ಟಿತು.
ಈ ಪ್ರಕರಣವು ಬಳಿಕ ಧರ್ಮಸ್ಥಳ ಠಾಣೆಗೆ ವರ್ಗಾಯಿಸಲ್ಪಟ್ಟಿತು. ಈ ಕುರಿತು ತನಿಖೆ ಕೈಗೆತ್ತಿಕೊಂಡ ಬೆಳ್ತಂಗಡಿ ವೃತ್ತದ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ವಿಚಾರಣೆ ಕೈಗೆತ್ತಿಕೊಳ್ಳಲಾಗಿದ್ದು, 23 ಸಾಕ್ಷಿದಾರರು ಸಾಕ್ಷಿ ನುಡಿದಿದ್ದರು, 40 ದಾಖಲೆಗಳನ್ನು ಹಾಜರುಪಡಿಸಲಾಗಿತ್ತು. ಮರಣೋತ್ತರ ವರದಿಯ ಪ್ರಕಾರ ಹಳೇ ಗಾಯಗಳೂ ಇದ್ದ ಕಾರಣ ಮಹಿಳೆ ಮೇಲೆ ಹಿಂದೆಯೂ ಹಿಂಸಾತ್ಮಕ ಹಲ್ಲೆ ನಡೆದಿದೆ ಎಂದು ವರದಿ ಕೊಡಲಾಗಿತ್ತು. ಹಲ್ಲೆ ವೇಳೆ ನಾಲ್ಕೈದು ಗಾಯಗಳಿದ್ದ ಕಾರಣ ಇದು ಕೊಲೆಯಲ್ಲ, ಆದರೆ ಐಪಿಸಿ 304 ಪಾರ್ಟ್-2 ಅನ್ವಯ ನರಹತ್ಯೆ ಎಂದು ನ್ಯಾಯಾಲಯವು ತೀರ್ಮಾನಿಸಿದೆ. ನ್ಯಾಯಾಧಿಶ ಎಚ್.ಎಸ್.ಮಲ್ಲಿಕಾರ್ಜುನ ಸ್ವಾಮಿ ಅವರು ವಿಚಾರಣೆ ನಡೆಸಿದ್ದಾರೆ. ಸರ್ಕಾರ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಒ.ಎಂ.ಕ್ರಾಸ್ತಾ ಅವರು ವಾದ ಮಂಡಿಸಿದ್ದರು.
*ಮಾನಸಿಕ ಅಸ್ವಸ್ಥೆ ಎಂದು ಬಿಂಬಿಸುವ ಯತ್ನ
ಸೌಮ್ಯ ಫ್ರಾನ್ಸಿಸ್ ಅವರಿಗೆ ಮಾನಸಿಕ ಕಾಯಿಲೆ ಇತ್ತು, ಅದಕ್ಕಾಗಿ ಮಾತ್ರೆ ಸೇವಿಸುತ್ತಿದ್ದರು, ಆಗಾಗ ರಬ್ಬರ್ ತೋಟದಲ್ಲಿ ಬೀಳುತ್ತಿದ್ದರು, ಅಲ್ಲದೆ ಕೊಟ್ಟಿಗೆಯಲ್ಲಿ ಬಿದ್ದ ಕಾರಣ ಸಾವು ಸಂಭವಿಸಿದೆ ಎಂದು ಜಾನ್ಸನ್ ವಾದ ಮುಂದಿರಿಸಿದ್ದ. ಆದರೆ ನ್ಯಾಯಾಲಯವು ಆತನ ವಾದವನ್ನು ಒಪ್ಪಿಕೊಳ್ಳಲು ನಿರಾಕರಿಸಿದೆ.