

ಉಡುಪಿ: ನಗರದ ಚಿಟ್ಪಾಡಿಯಲ್ಲಿ 2015ರಲ್ಲಿ ಹೆಂಡತಿ ಮತ್ತು ಅತ್ತೆಯನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ದೋಷಿ ಎಂದು ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಲಯ ನ್ಯಾಯಾಧೀಶ ಜೆ.ಎನ್ ಸುಬ್ರಹ್ಮಣ್ಯ ತೀರ್ಪು ಬುಧವಾರ ಪ್ರಕಟಿಸಿದ್ದು, ಶಿಕ್ಷೆ ಪ್ರಮಾಣವನ್ನು ಫೆ.15ರಂದು ಪ್ರಕಟಿಸಲಿದ್ದಾರೆ.
ಘಟನೆ ವಿವರ: ಚಿಟ್ಪಾಡಿ, ಕಸ್ತೂರ್ಬಾನಗರದಲ್ಲಿ ವಾಸವಾಗಿದ್ದ ಸಂಜಯಕುಮಾರ್ ದತ್ತ ಮೂಲತಃ ಅಸ್ಸಾಂ ನಿವಾಸಿಯಾಗಿದ್ದು, 20 ವರ್ಷಗಳಿಂದ ಉಡುಪಿಯಲ್ಲಿ ನೆಲೆಸಿದ್ದ. ಮಂಗಳೂರು ಬೈಕಂಪಾಡಿ ಫ್ಯಾಕ್ಟರಿಯಲ್ಲಿ ಮ್ಯಾನೇಜರ್ ಆಗಿದ್ದ ಸಂಜಯ್, ಚಿಟ್ಪಾಡಿಯ ನಿವಾಸಿ ಅರ್ಚನಾ ಎಂಬುವರನ್ನು ವಿವಾಹವಾಗಿದ್ದ. ದಂಪತಿಗೆ ಮೂವರು ಮಕ್ಕಳಿದ್ದು, ಕೌಟುಂಬಿಕ ವಿಚಾರದಲ್ಲಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. 2015 ಏ.30ರಂದು ರಾತ್ರಿ ಮಾತಿಗೆ ಮಾತು ಬೆಳೆದು ಜಗಳ ವಿಪರೀತಗೊಂಡು ಪತ್ನಿ ಅರ್ಚನಾ ಮತ್ತು ಅತ್ತೆ ನಿರ್ಮಲಾ ಅವರನ್ನು ಕತ್ತಿಯಿಂದ ಕಡಿದಿದ್ದಾನೆ. ಗಂಭೀರ ಗಾಯಗೊಂಡ ನಿರ್ಮಲಾ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಸಾವು, ಬದುಕಿನ ನಡುವೆ ಹೋರಾಡುತ್ತಿದ್ದ ಅರ್ಚನ ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 2015 ಮೇ 1 ರಂದು ಚಿಕಿತ್ಸೆಗೆ ಸ್ಪಂದಿಸದೆ ಅರ್ಚನಾ ಕೂಡ ಮೃತಪಟ್ಟಿದ್ದರು.
ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಆರೋಪಿ ಸಂಜಯ್‌ನನ್ನು ಮೇ 5 ರಂದು ಪೊಲೀಸರು ಬಂಧಿಸಿದ್ದರು. ಪ್ರಕರಣದ ಬಗ್ಗೆ ತನಿಖೆ ನಡೆಸಿದ ಅಂದಿನ ವೃತ್ತ ನಿರೀಕ್ಷಕ ಶ್ರೀಕಾಂತ್ ನಾಯ್ಕ ದೋಷರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದಲ್ಲಿ 44 ಸಾಕ್ಷಿಗಳ ಪೈಕಿ 25 ಮಂದಿ ಹೇಳಿಕೆಯನ್ನು ಪಡೆದುಕೊಳ್ಳಲಾಗಿದೆ. ಪ್ರಕರಣದ ಬಗ್ಗೆ ಕೂಲಂಕಷ ವಿಚಾರಣೆ ನಡೆಸಿದ ನ್ಯಾಯಾಧೀಶ ಜೆ.ಎನ್. ಸುಬ್ರಹ್ಮಣ್ಯ ಆರೋಪಿ ಸಂಜಯ್‌ಕುಮಾರ್ ದತ್ತನನ್ನು ದೋಷಿ ಎಂದು ಪರಿಗಣಿಸಿ ತೀರ್ಪು ಪ್ರಕಟಿಸಿದ್ದಾರೆ. ಪ್ರಾಸಿಕ್ಯೂಶನ್ ಪರವಾಗಿ ಶಾಂತಿಬಾಯಿ ವಾದ ಮಂಡಿಸಿದ್ದರು.