ಬಸ್ ಮಾಲೀಕ ಬರ್ಬರ ಹತ್ಯೆ : ಕೊಡವೂರು ಸಮೀಪ ನಾಗಬನದ ಬಳಿ ಮನೆಯಲ್ಲಿ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

New Project (1)
Published on

ವಿಜಯವಾಣಿ ಸುದ್ದಿಜಾಲ ಉಡುಪಿ

ಉಡುಪಿ-ಮಂಗಳೂರು ಜಿಲ್ಲೆಯಲ್ಲಿ ಸಾರಿಗೆ ಸೇವೆ ನೀಡುತ್ತಿದ್ದ ಖಾಸಗಿ ಬಸ್ (ಎಕೆಎಂಎಸ್) ಸಂಸ್ಥೆ ಮಾಲೀಕ ಸೈಫುದ್ದೀನ್ ಅಲಿಯಾಸ್ ಸೈಫ್(52) ಅವರನ್ನು ದುಷ್ಕರ್ಮಿಗಳು ಮಲ್ಪೆಯ ಕೊಡವೂರು ಸಮೀಪ ನಾಗಬನದ ಬಳಿ ಇರುವ ಮನೆಯಲ್ಲೇ ಶನಿವಾರ ಬೆಳಗ್ಗೆ ಚಾಕು, ತಲವಾರ್‌ನಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ.

ಮೂಲತಃ ಆತ್ರಾಡಿ ನಿವಾಸಿ ಸೈಫ್, ಇತ್ತೀಚೆಗೆ ಮಲ್ಪೆಯ ಸಾಲ್ಮರದ ಬಳಿ ಮನೆ ಖರೀದಿಸಿದ್ದರು. ಬೆಳಗ್ಗೆ 10.30ರ ಬಳಿಕ ನಾಗಬನದ ಬಳಿ ಮನೆಯಲ್ಲಿ ದುಷ್ಕರ್ಮಿಗಳು ಮಾರಾಕಾಸಗಳಿಂದ ಕೊಚ್ಚಿ ಕೊಂದಿದ್ದಾರೆ. ದೇಹದಲ್ಲಿ ಇರಿತದ ಗಾಯಗಳಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಎಕೆಎಂಎಸ್ ಎಂಬ ಹೆಸರಿನ ಅನೇಕ ಬಸ್ ಹೊಂದಿದ್ದ ಸೈಫ್, ಉಡುಪಿ ಹಾಗೂ ಹಿರಿಯಡ್ಕ ಠಾಣೆಯ ರೌಡಿಶೀಟರ್ ಕೂಡ ಆಗಿದ್ದಾರೆ. ಅವರ ವಿರುದ್ಧ 18ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣ ದಾಖಲಾಗಿದ್ದವು. ಎರಡು ಕೊಲೆ ಪ್ರಕರಣಗಳಲ್ಲಿ ಅವರು ಆರೋಪ ಎದುರಿಸುತ್ತಿದ್ದರು.

ಮಾತನಾಡಲು ಕರೆದು ಸ್ನೇಹಿತರೇ ಕೊಂದರೇ?

ಸೈಫುದ್ದೀನ್ ಅವರನ್ನು ಸ್ನೇಹಿತರೇ ಹತ್ಯೆ ಮಾಡಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಉಡುಪಿ ಕುಕ್ಕಿಕಟ್ಟೆ ನಿವಾಸಿ ಫೈಜಲ್ ಖಾನ್ ಮತ್ತು ದೊಡ್ಡಣಗುಡ್ಡೆ ನಿವಾಸಿ ಶರ್ೀ ಎಂಬುವರು ಸೈಫುದ್ದೀನ್ ಅವರ ಸ್ನೇಹಿತರು. ಶನಿವಾರ ಬೆಳಗ್ಗೆ ಫೈಜಲ್ ಖಾನ್ ಎಂಬಾತ ಸೈಫ್ ಮನೆಗೆ ಬಂದು ಬಸ್ ವ್ಯವಹಾರದಲ್ಲಿ ಮಾತನಾಡಲು ಮಂಗಳೂರಿಗೆ ಹೋಗಬೇಕಿದೆ ಎಂದು ತಿಳಿಸಿ, ಬೆಳಗ್ಗೆ 10 ಗಂಟೆಗೆ ಮಣಿಪಾಲದ ಕಾಯಿನ್ ಸರ್ಕಲ್ ಬಳಿ ಇರುವ ಮನೆಯಿಂದ ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು. ಫೈಜಲ್ ಖಾನ್ ಮತ್ತು ಶರೀಫ್ ಇತರರೊಂದಿಗೆ ಸೇರಿ ದ್ವೇಷದ ಹಿನ್ನೆಲೆಯಲ್ಲಿ ಸೈುದ್ದೀನ್‌ನನ್ನು ಕೊಲ್ಲುವ ಉದ್ದೇಶದಿಂದಲೇ ಮಲ್ಪೆಗೆ ಕರೆದುಕೊಂಡು ಬಂದಿದ್ದಾರೆ ಎಂದು ಆರೋಪಿಸಲಾಗಿದೆ. ಬೆಳಗ್ಗೆ 10.15ರಿಂದ 11.30ರ ನಡುವಿನ ಸಮಯದಲ್ಲಿ ಮಚ್ಚಿನಿಂದ ತಲೆ ಮತ್ತು ಬೆನ್ನಿಗೆ ಕೊಚ್ಚಿ ಕೊಲೆ ಮಾಡಿ ಕಾರಿನಲ್ಲಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸೈುದ್ದೀನ್ ಅವರ ಪುತ್ರನ ದೂರಿನಂತೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ ಮೂವರು ದುಷ್ಕರ್ಮಿಗಳು ಏಕಕಾಲದಲ್ಲಿ ಸೈಫುದ್ದೀನ್ ಮೇಲೆ ಚಾಕು, ತಲವಾರ್‌ನಿಂದ ದಾಳಿ ನಡೆಸಿದ್ದಾರೆಂಬ ಮಾಹಿತಿಯಿದೆ. ಆರೋಪಿಗಳು ಎಕೆಎಂಎಸ್ ಸಂಸ್ಥೆಯಲ್ಲೇ ಕೆಲಸ ಮಾಡುತ್ತಿದ್ದವರು ಎಂದು ಶಂಕಿಸಲಾಗಿದೆ. ಹಳೆಯ ವೈಮನಸ್ಸಿನಿಂದಾಗಿ ಪ್ರತೀಕಾರದ ಕೊಲೆ ಆಗಿದೆಯೇ ಅಥವಾ ಬೇರೆ ಕಾರಣವೇ ತಿಳಿದಿಲ್ಲ. ತನಿಖೆಗೆ ಮೂರು ತಂಡ ರಚಿಸಲಾಗಿದೆ. ಹರಿರಾಂ ಶಂಕರ್, ಉಡುಪಿ ಎಸ್ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net