ಠಾಣೆಯಲ್ಲಿ ಪೊಲೀಸರ ಎದುರೇ ಮಗುವನ್ನು ಕೊಲ್ಲಲು ಯತ್ನಿಸಿದ ತಂದೆ

crime
Published on

ಮಂಗಳೂರು: ಕದ್ರಿ ಪೊಲೀಸ್ ಠಾಣೆಯಲ್ಲಿ ಪೊಲೀಸರ ಎದುರಲ್ಲೇ ತಂದೆಯೋರ್ವ ಮದ್ಯದ ಅಮಲಿನಲ್ಲಿ ತನ್ನ ಒಂದೂವರೆ ವರ್ಷ ಪ್ರಾಯದ ಹೆಣ್ಣು ಮಗುವನ್ನು ಕುತ್ತಿಗೆ ತಿರುಗಿಸಿ, ನೆಲಕ್ಕೆ ಬಡಿದು ಕೊಲೆಗೆ ಯತ್ನಿಸಿದ ಹೃದಯ ವಿದ್ರಾವಕ ಘಟನೆ ನಡೆದಿದೆ.


ವ್ಯಾಸನಗರ ವಿಶ್ವಾಸ್ ಅನ್ಮೋಲ್ ಅಪಾರ್ಟ್‌ಮೆಂಟ್‌ನ 5ನೇ ಮಹಡಿಯಲ್ಲಿ ವಾಸವಿರುವ ಮಹೇಶ್ ನೀಚ ಕೃತ್ಯ ಎಸಗಿದ ಆರೋಪಿ. ಈತನಿಗೆ ವಿಪರೀತ ಮದ್ಯ ಸೇವನೆ ಚಟ. ಹಲವು ಸಮಯಗಳಿಂದ ಅಮಲು ಪದಾರ್ಥ ಸೇವಿಸಿ ಪತ್ನಿ ಮತ್ತು ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ.


ಸೆ.24ರಂದು ರಾತ್ರಿ ಜಗಳ ಮಾಡಿ ಪತ್ನಿ ಪೂಜಾ ಮತ್ತು ಮಕ್ಕಳನ್ನು ಬೆಂಕಿ ಹಚ್ಚಿ ಕೊಲ್ಲುತ್ತೇನೆ ಎಂದು ಬೆದರಿಸಿ, ಹಲ್ಲೆ ನಡೆಸಲು ಮುಂದಾದಾಗ ಪೂಜಾ ಅವರು ತಪ್ಪಿಸಿಕೊಂಡು ನೇರವಾಗಿ ಹತ್ತಿರದಲ್ಲೇ ಇರುವ ಕದ್ರಿ ಪೊಲೀಸ್ ಠಾಣೆಗೆ ಓಡಿ ಬಂದಿದ್ದಾರೆ. ಪೊಲೀಸರು ಆದಷ್ಟು ಬೇಗ ನಮ್ಮ ಮನೆಗೆ ಬಂದು ಗಂಡನಿಂದ ಮಕ್ಕಳನ್ನು ರಕ್ಷಿಸಿ ಎಂದಿದ್ದಾರೆ. ತಕ್ಷಣ ಕರ್ತವ್ಯದಲ್ಲಿದ್ದ ಪೊಲೀಸರು ಹೊರಡುತ್ತಿದ್ದಂತೆ ಆರೋಪಿ ಮಹೇಶ ತನ್ನ 6 ವರ್ಷದ ಗಂಡು ಮಗು ಮತ್ತು ಒಂದೂವರೆ ವರ್ಷದ ಹೆಣ್ಣು ಮಗುವನ್ನು ಕರೆದುಕೊಂಡು ಠಾಣೆಗೆ ಬಂದಿದ್ದಾನೆ.


ಪೊಲೀಸರು ಆತನನ್ನು ವಿಚಾರಿಸಿದಾಗ ಆತ ಪತ್ನಿ ತನಗೆ ಹೊಡೆದಿರುವುದಾಗಿ ಹೇಳಿದ್ದಾನೆ. ದೂರು ನೀಡಲು ಹೇಳಿದಾಗ ಆತ ಕಿರುಚಾಟ ನಡೆಸಿ, ಯಾರನ್ನೂ ಬಿಡುವುದಿಲ್ಲ ಎಂದು ತನ್ನ ಇಬ್ಬರು ಮಕ್ಕಳನ್ನು ಎಳೆದುಕೊಂಡು ಠಾಣೆಯಿಂದ ಹೊರಗೆ ಹೋಗಿದ್ದಾನೆ. ಈ ಸಂದರ್ಭ ಠಾಣೆಯೊಳಗಿದ್ದ ಪೂಜಾ ಅವರು ಹೊರಗೆ ಬಂದಾಗ ಮಹೇಶ ಮತ್ತಷ್ಟು ಜೋರಾಗಿ ಕಿರುಚಿದ್ದಾನೆ. ತನ್ನ ಕೈಯ್ಯಲ್ಲಿದ್ದ ಮಗಳನ್ನು ಗೋಡೆಗೆ ಬಿಸಾಡುತ್ತೇನೆಂದು ಹೇಳಿ ಮಗುವನ್ನು ಕೊಲ್ಲುವುದಾಗಿ ಹೇಳಿದ್ದಾನೆ. ಪೊಲೀಸರು ಮಗುವನ್ನು ಬಿಡುವಂತೆ ಹೇಳಿದಾಗ, ನನ್ನ ಮಗು ನಾನು ನನ್ನ ಮಗುವಿಗೆ ಏನು ಬೇಕಾದರೂ ಮಾಡಬಹುದು. ಅದನ್ನು ಕೇಳಲು ನೀವು ಯಾರು ಎಂದು ಹೇಳಿ ಮಗುವಿನ ಕುತ್ತಿಗೆಯನ್ನು ತಿರುಗಿಸಿ ಕೈಯನ್ನು ಹಿಡಿದು ಎಳೆದಾಡಿ ಮಗುವನ್ನು ಎತ್ತಿ ನೆಲಕ್ಕೆ ಬಿಸಾಡಿ ಕೊಲ್ಲಲು ಪ್ರಯತ್ನಿಸಿದ್ದಾನೆ.


ಇದರಿಂದ ಮಗುವಿನ ಕುತ್ತಿಗೆಗೆ ಹಾಗೂ ತಲೆಗೆ ಗುದ್ದಿದ ಗಾಯವಾಗಿ ಮಗು ಜೋರಾಗಿ ಕೂಗಲು ಆರಂಭಿಸಿದೆ. ಈ ಸಮಯಕ್ಕೆ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಠಾಣಾ ಪಿ.ಎಸ್.ಐ ಪ್ರತಿಭಾ ಠಾಣೆಗೆ ಬಂದಿದ್ದ, ಕೂಡಲೇ ಮಗುವನ್ನು ಎತ್ತಿಕೊಂಡು ಮಗುವಿನ ತಾಯಿ ಹಾಗು ದೊಡ್ಡ ಮಗುವನ್ನು ಕರೆದುಕೊಂಡು ಇಲಾಖಾ ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಠಾಣಾ ಪ್ರಭಾರ ಕರ್ತವ್ಯದಲ್ಲಿದ್ದ ಹೆಡ್‌ಕಾನ್‌ಸ್ಟೇಬಲ್ ಶರತ್ ಕುಮಾರ್ ಅವರು ಹಸುಗೂಸಿನ ಜೀವ ರಕ್ಷಣೆ ಬಗ್ಗೆ ಪ್ರಯತ್ನಿಸಿದಾಗ ಆರೋಪಿ ಬಿಡದೆ ಠಾಣೆಯಲ್ಲಿ ಸರ್ಕಾರಿ ಕರ್ತವ್ಯ ನಿರ್ವಹಣೆಗೆ ಅಡ್ಡಿ ಪಡಿಸಿ, ಹಸುಗೂಸನ್ನು ಕೊಲ್ಲಲು ಪ್ರಯತ್ನಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.


ಉರ್ವ ಪೊಲೀಸರಿಂದ ತನಿಖೆ: ಕದ್ರಿ ಪೊಲೀಸ್ ಠಾಣೆ ಉರ್ವ ಠಾಣಾ ವ್ಯಾಪ್ತಿಗೆ ಬರುವುದರಿಂದ ಘಟನೆಯ ತನಿಖೆ ಉರ್ವ ಪೊಲೀಸರು ನಡೆಸಬೇಕು. ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ, ಅದನ್ನು ಉರ್ವ ಠಾಣೆಗೆ ಹಸ್ತಾಂತರಿಸಲಾಗುತ್ತದೆ. ಗಾಯಾಳು ಮಗು ಚೇತರಿಸಿಕೊಳ್ಳುತ್ತಿದ್ದು, ಆರೋಪಿ ಮಹೇಶ್ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net