ಸ್ಕೂಟರ್ ದರೋಡೆ ಪ್ರಕರಣ ಭೇದಿಸಿದಾಗ ಬಯಲಾಯ್ತು ಕೊಲೆ ಸಂಚು!

crime
Published on
ಮಂಗಳೂರು: ಭೇದಿಸಿದ್ದು ನಗರದಲ್ಲಿ ನಡೆದ ಎರಡು ಸ್ಕೂಟರ್ ದರೋಡೆ ಪ್ರಕರಣ...ಆದರೆ ಇದರಿಂದ ಬಯಲಾಗಿದ್ದು ಪ್ರಮುಖ ಕೊಲೆಯೊಂದರ ಸಂಚು... ಗ್ಯಾಂಗ್ ಕಟ್ಟಿಕೊಂಡು ಬಂಧಿತ ಭೂಗತ ಪಾತಕಿ ರವಿ ಪೂಜಾರಿಯ ಸಹಚರರನ್ನು ಹತ್ಯೆ ಮಾಡಲು ಯತ್ನಿಸಿದ ನಾಲ್ವರು ಕುಖ್ಯಾತ ಕ್ರಿಮಿನಲ್‌ಗಳನ್ನು ಮಂಗಳೂರು ಪೊಲೀಸರ ತಂಡ ಬಂಧಿಸಿದೆ.

ಆರೋಪಿ ದೀಕ್ಷಿತ್ ಯಾನೆ ದೀಕ್ಷು ಕುಂಡಕೋರಿ ಯಾನೆ ದೀಕ್ಷಿತ್ ಪೂಜಾರಿ ಕುಲಶೇಖರ(32), ಚಂದ್ರ ಯಾನೆ ಚಂದ್ರಹಾಸ ಪೂಜಾರಿ ಸೋಮೇಶ್ವರ(34), ಪ್ರಜ್ವಲ್ ಯಾನೆ ಹೇಮಚಂದ್ರ ಕೋಟೆಕಾರ್ ಹಾಗೂ ಸಂತೋಷ್ ಪೂಜಾರಿ ಯಾನೆ ನಾಯಿ ಸಂತು(38) ಬಂಧಿತ ಆರೋಪಿಗಳು. ಇವರೆಲ್ಲರೂ ರೌಡಿಶೀಟರ್ ಆಗಿದ್ದಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಕರಣದ ಹಿನ್ನೆಲೆ: ಕಂಕನಾಡಿ ವ್ಯಾಪ್ತಿಯಲ್ಲಿ ಮಾ.17ರಂದು ನಾಲ್ಕು ಮಂದಿಯ ತಂಡ ಸ್ಕೂಟರ್ ತಡೆದು ನಿಲ್ಲಿಸಿ ಚೂರಿ ತೋರಿಸಿ ಸ್ಕೂಟರ್ ಸಹಿತ ಮೊಬೈಲ್, ನಗದು ಇತ್ಯಾದಿ ದೋಚಿತ್ತು. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮರುದಿನ ನೀರುಮಾರ್ಗ ಬಳಿ ಇದೇ ಮಾದರಿಯಲ್ಲಿ ದ್ವಿಚಕ್ರ ವಾಹನ ಸಮೇತ ದರೋಡೆ ನಡೆಸಿತ್ತು. ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು ಈ ದರೋಡೆ ತಂಡವನ್ನು ಬಂಧಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.

ಆರೋಪಿ ದೀಕ್ಷಿತ್ ಮೇಲೆ ಮಂಗಳೂರು ಪೂರ್ವ, ಬರ್ಕೆ, ಸುರತ್ಕಲ್, ಉತ್ತರ ಠಾಣೆ, ಉರ್ವ, ಕಾವೂರು, ಮಂಗಳೂರು ದಕ್ಷಿಣ, ಉಳ್ಳಾಲ, ಉಡುಪಿ ನಗರ ಠಾಣೆಗಳಲ್ಲಿ ಈಗಾಗಲೇ ಒಟ್ಟು 12 ಕೇಸ್ ದಾಖಲಾಗಿವೆ. ಅದರಲ್ಲಿ 2 ಕೊಲೆ, 4 ಕೊಲೆ ಯತ್ನ, 1 ಅಪಹರಣ, 2 ಆಯುಧ ಕಾಯ್ದೆ, 3 ಗಾಂಜಾ ಕೇಸ್ ಸೇರಿದೆ. ಈತನ ವಿರುದ್ಧ ಕದ್ರಿ, ಉರ್ವ, ಬರ್ಕೆ, ಕಂಕನಾಡಿ ನಗರ ಠಾಣೆಗಳಲ್ಲಿ ರೌಡಿಶೀಟ್ ತೆರೆಯಲಾಗಿದೆ.

ಆರೋಪಿ ಚಂದ್ರಹಾಸ ಪೂಜಾರಿ ವಿರುದ್ಧ ಉಳ್ಳಾಲ ಠಾಣೆಯಲ್ಲಿ ರೌಡಿಶೀಟ್ ತೆರೆಯಲಾಗಿದ್ದು, ಉಳ್ಳಾಲ, ಮುಂಬೈ, ಬಜ್ಪೆ ಠಾಣೆಗಳಲ್ಲಿ ಒಟ್ಟು 7 ಕೇಸ್ ದಾಖಲಾಗಿದೆ. ಇದರಲ್ಲಿ 1 ಕೊಲೆ, 2 ಕೊಲೆ ಯತ್ನ, 2 ಆಯುಧ ಕಾಯ್ದೆ ಮತ್ತು 2 ಮರಳು ಪ್ರಕರಣ ಸೇರಿದೆ. ಆರೋಪಿ ಪ್ರಜ್ವಲ್ ಮೇಲೆ ಕೊಣಾಜೆ ಮತ್ತು ಉಳ್ಳಾಲ ಠಾಣೆಯಲ್ಲಿ ರೌಡಿಶೀಟ್ ತೆರೆಯಲಾಗಿದೆ. ಬರ್ಕೆ, ಗ್ರಾಮಾಂತರ, ದಕ್ಷಿಣ, ಉಳ್ಳಾಲ, ಬಂಟ್ವಾಳ ನಗರ, ಕಂಕನಾಡಿ ನಗರ ಠಾಣೆಗಳಲ್ಲಿ ಒಟ್ಟು 9 ಕೇಸ್ ಇದೆ. ಇದರಲ್ಲಿ 1 ಕೊಲೆ ಕೇಸ್, 3 ಕೊಲೆ ಯತ್ನ, ತಲಾ 1 ಆಯುಧ ಕಾಯ್ದೆ, ಕಳವು, ಹಲ್ಲೆ ಹಾಗೂ 2 ಗಾಂಜಾ ಕೇಸ್ ಸೇರಿದೆ. ಸಂತೋಷ್ ಪೂಜಾರಿ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ರೌಡಿಶೀಟ್ ತೆರೆಯಲಾಗಿದೆ. ಇಲ್ಲಿ 2 ಕೇಸ್ ಇದ್ದು 1 ಕೊಲೆ ಹಾಗೂ ಕೊಲೆ ಯತ್ನ ಕೇಸ್ ಒಳಗೊಂಡಿದೆ ಎಂದರು.

ರವಿ ಪೂಜಾರಿ ಸಹಚರರ ಹತ್ಯೆಗೆ ಸ್ಕೆಚ್: ಬಂಧಿತ ಆರೋಪಿಗಳು ಬಂಧಿತ ಭೂಗತ ಪಾತಕಿ ರವಿ ಪೂಜಾರಿ ಸಹಚರರಾದ ಪ್ರದೀಪ್ ಮೆಂಡನ್ ಮತ್ತು ಮಂಕಿಸ್ಟಾೃಂಡ್ ವಿಜಯ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿರುವುದು ವಿಚಾರಣೆಯಲ್ಲಿ ಗೊತ್ತಾಗಿದೆ. ತಮ್ಮ ಸಹಚರರನ್ನು ಸೇರಿಸಿಕೊಂಡು ದೊಡ್ಡ ಗ್ಯಾಂಗ್ ಕಟ್ಟಲು ಸಿದ್ಧತೆ ನಡೆಸುತ್ತಿದ್ದರು. ಇದರ ಮೊದಲ ಹಂತವೇ ವಾಹನ ದರೋಡೆ. ಹಲ್ಲೆ ನಡೆಸಿದ ಬಳಿಕ ವಾಹನದಲ್ಲಿ ಹೇಗೆ ಪರಾರಿಯಾಗಬೇಕು ಹಾಗೂ ತನಿಖೆಯ ದಾರಿ ತಪ್ಪಿಸಬೇಕು ಎಂಬ ಬಗ್ಗೆ ಸಂಚು ರೂಪಿಸಲಾಗಿತ್ತು. ಪೊಲೀಸರು ಅಲರ್ಟ್ ಆಗಿರದಿದ್ದರೆ ಮುಂದಿನ 15 ದಿನದೊಳಗೆ ಕೊಲೆ ನಡೆಯುತ್ತಿತ್ತು ಎಂದರು.

ಕಸ್ಟಡಿ ಕೋರಿಕೆ: ಮಂಗಳೂರಿನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಜೈಲಿನಲ್ಲಿ ಇರುವ ರೌಡಿಶೀಟರ್ ಆಕಾಶಭವನ ಆರೋಪಿಯ ಸಹಚರರು ಇವರಾಗಿದ್ದಾರೆ. ರವಿ ಪೂಜಾರಿ ಸಹಚರರನ್ನು ಕೊಲೆ ಮಾಡಿದರೆ, ಸುಲಭದಲ್ಲಿ ನಮಗೆ ಖ್ಯಾತಿ ಬರುತ್ತದೆ. ಬಳಿಕ ಹಫ್ತಾ ವಸೂಲಿ ಸೇರಿದಂತೆ ಕೊಲೆ, ಸುಲಿಗೆಯನ್ನು ಸುಲಭದಲ್ಲಿ ಮುಂದುವರಿಸಬಹುದು ಎಂಬುದು ಇವರ ಲೆಕ್ಕಾಚಾರವಾಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು ಜೈಲಿನಲ್ಲಿರುವ ಆರೋಪಿಗಳಿಬ್ಬರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ 8-10 ಮಂದಿ ಆರೋಪಿಗಳು ಇದ್ದು ಅವರ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ, ಅಲ್ಲದೆ ಪಿಸ್ಟಲ್ ಖರೀದಿಗಾಗಿ ಇವರು ಪೂನಾದ ಕೆಲವರೊಂದಿಗೆ ಸಂಪರ್ಕದಲ್ಲಿದ್ದು ಅವರ ಪತ್ತೆಗೂ ಯತ್ನಿಸಲಾಗುತ್ತಿದೆ ಎಂದರು. ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ್ ಗಾಂವ್ಕರ್ ಇದ್ದರು.

ಮರಳು ಗ್ಯಾಂಗ್‌ನಲ್ಲಿ ಸಕ್ರಿಯ: ಆರೋಪಿ ಚಂದ್ರಹಾಸ ಪೂಜಾರಿ ಮರಳು ಗ್ಯಾಂಗ್‌ನಲ್ಲಿ ಸಕ್ರಿಯವಾಗಿದ್ದ, ಇತ್ತೀಚೆಗೆ ಡಿಸಿಪಿ ಹರಿರಾಂ ಶಂಕರ್ ತಂಡ ತಲಪಾಡಿ ಗೇಟ್‌ನಲ್ಲಿ ಕೇರಳಕ್ಕೆ ಅಕ್ರಮ ಮರಳು ಸಾಗಾಟ ಪತ್ತೆ ಮಾಡಿದಾಗ ಈತನೇ ಪೊಲೀಸರ ವಿರುದ್ಧ ತಿರುಗಿಬಿದ್ದಿದ್ದ.

ದೂರು ನೀಡದಂತೆ ಬೆದರಿಕೆ: ದರೋಡೆ ಕೃತ್ಯ ನಡೆಸಿದ ಬಳಿಕ ಪೊಲೀಸರಿಗೆ ದೂರು ನೀಡದಂತೆ ಸಂತ್ರಸ್ತರನ್ನು ಬೆದರಿಸುತ್ತಿದ್ದರು. ಒಂದು ವೇಳೆ ದೂರು ನೀಡಿದರೆ, ಜಾಮೀನು ಪಡೆದು ಹೊರಬಂದು ಮತ್ತೆ ಜೀವ ಸಹಿತ ಬಿಡುವುದಿಲ್ಲ ಎಂದು ಹೆದರಿಸುತ್ತಿದ್ದರು. ಇದರಿಂದ ದರೋಡೆಗೆ ಒಳಗಾದವರು ದೂರು ನೀಡಲು ಹಿಂದೇಟು ಹಾಕುತ್ತಿದ್ದರು. ಪೊಲೀಸರು ಧೈರ್ಯ ಹೇಳಿದ ಮೇಲೆ ದೂರು ನೀಡಿದ್ದರು ಎಂದು ಕಮಿಷನರ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net