ಮಂಗಳೂರು: ನಗರದ ಲಾಲ್‌ಬಾಗ್ ಸಿಗ್ನಲ್ ಬಳಿ ಶನಿವಾರ ಮಧ್ಯಾಹ್ನ ಸಾರ್ವಜನಿಕರ ಕಣ್ಣೆದುರಲ್ಲೇ ವ್ಯಕ್ತಿಯೊಬ್ಬರ ಮೇಲೆ ತಲವಾರಿನಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ರೌಡಿ ಶೀಟರ್ ವಿಕ್ಕಿ ಬಪ್ಪಾಲ್ ಯಾನೆ ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಇಂದು ಮಧ್ಯಾಹ್ನ ಸುಮಾರು 1:45ರ ವೇಳೆಗೆ ವಿಕ್ಕಿ ಬಪ್ಪಾಲ್ ಅವರು ಬೈಕ್‌ನಲ್ಲಿ ತೆರಳುತ್ತಿದ್ದಾಗ, ಹಿಂಬಾಲಿಸಿಕೊಂಡು ಬಂದ ಅಪರಿಚಿತ ಬೈಕ್ ಸವಾರನೊಬ್ಬ ಚಲಿಸುತ್ತಿದ್ದ ಬೈಕ್‌ನಿಂದಲೇ ತಲವಾರಿನಿಂದ ಏಕಾಏಕಿ ದಾಳಿ ನಡೆಸಿದ್ದಾನೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ದಾಳಿಕೋರ ಒಬ್ಬನೇ ಬಂದಿದ್ದು, ಕೃತ್ಯ ಎಸಗಿದ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾನೆ.
ಹಲ್ಲೆಯಿಂದ ವಿಕ್ಕಿ ಅವರ ಕತ್ತಿನ ಭಾಗಕ್ಕೆ ಆಳವಾದ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಪ್ರಕ್ರಿಯೆ ನಡೆಯುತ್ತಿದೆ.
ಪರಾರಿಯಾಗಿರುವ ಆರೋಪಿಯ ಪತ್ತೆಗಾಗಿ ನಗರದಾದ್ಯಂತ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗಿದ್ದು, ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ನಿಗಾ ಇಡಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.