

ಮಂಗಳೂರು: ಜಾಗದ ತಕರಾರಿನ ದ್ವೇಷದಿಂದ ಕೊಲೆಯತ್ನ ನಡೆಸಿದ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗಳಿಗೆ 3 ವರ್ಷ ಸಾದಾ ಸಜೆ ಹಾಗೂ ತಲಾ 2,500 ರೂ. ದಂಡ ವಿಧಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ.ಜಕಾತಿ ಶುಕ್ರವಾರ ತೀರ್ಪು ನೀಡಿದ್ದಾರೆ.
ಮೂಡುಬಿದಿರೆ ತಾಲೂಕು ನಿಡ್ಡೋಡಿ ಗ್ರಾಮದ ಕೊಂಟಡ್ಕದಲ್ಲಿ ವಸಂತರಾಜ ಶೆಟ್ಟಿ ಅವರನ್ನು ಆರೋಪಿಗಳಾದ ಪ್ರಸನ್ನ ಕುಮಾರ್, ಜಯಂತಿ ಸುವರ್ಣ ಮತ್ತು ರಕ್ಷಾ ಸುವರ್ಣ ಕೊಲೆ ಮಾಡಲು ಯತ್ನಿಸಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು.
2020ರ ಫೆ.28ರಂದು ಬೆಳಗ್ಗೆ ವಸಂತರಾಜ ಶೆಟ್ಟಿ ಅವರ ಮನೆ ಕಾಂಪೌಂಡ್ ಒಳಗೆ ನುಗ್ಗಿದ ಅಪರಾಧಿಗಳು ಅವಾಚ್ಯ ಶಬ್ದಗಳಿಂದ ಬೈದು ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಕಲ್ಲುಗಳಿಂದ ಹೊಡೆದು ಹಲ್ಲೆ ನಡೆಸಿದ್ದರು. ಮೂಡುಬಿದಿರೆ ಪೊಲೀಸ್ ಉಪನಿರೀಕ್ಷಕರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಇಬ್ಬರು ಪ್ರತ್ಯಕ್ಷ ಸಾಕ್ಷಿದಾರರು ಅಭಿಯೋಜನೆ ಪರ ಸಾಕ್ಷಿ ನೀಡಿದ್ದು, ಆರೋಪಿಗಳು ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡಿರುವುದು ರುಜುವಾತಾಗಿದೆ ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಸಂಗ್ರಹಿಸಲಾದ ದಂಡದ ಮೊತ್ತದಲ್ಲಿ ವಸಂತರಾಜ ಶೆಟ್ಟಿ ಅವರಿಗೆ 6 ಸಾವಿರ ರೂ. ಮೊತ್ತ ಪರಿಹಾರವಾಗಿ ನೀಡಲು ನ್ಯಾಯಾಧೀಶರು ಆದೇಶಿಸಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಅಭಿಯೋಜಕ ನಾರಾಯಣ ಶೇರಿಗಾರ್ ಯು. ವಾದ ಮಂಡಿಸಿದ್ದಾರೆ.